ಬೆಂಗಳೂರು: ಕೆಲವರಿಗೆ ಬೇಗನೇ ಕೋಪ ಬರುವುದು, ಮೂಡ್ ಸ್ವಿಂಗ್ ಆಗುವುದು ಸಾಮಾನ್ಯವಾಗಿ ಆಗಿರುತ್ತದೆ. ಚಿಕ್ಕ ಚಿಕ್ಕ ವಿಷಯಕ್ಕೂ ಕೋಪ ಮಾಡಿಕೊಳ್ಳುವುದು ಕೂಡಾ ಒಂದು ವಿಟಮಿನ್ ಕೊರತೆಯಿಂದ ಅಂದರೆ ನೀವು ನಂಬಲೇ ಬೇಕು.
ಕೋಪ ಬರುವುದು ಮನುಷ್ಯ ಸಹಜ ಗುಣ. ಆದರೆ ಕೆಲವೊಮ್ಮೆ ಅನಗತ್ಯ ಕಾರಣಗಳಿಗೆ ಕೋಪ ಬರುವುದು, ಇನ್ನೊಬ್ಬರು ಏನಾದರೂ ಹೇಳಿದರೆ ಚಿಕ್ಕ ವಿಷಯಕ್ಕೆ ಕಿರಿ ಕಿರಿಯಾಗುವುದು ಸಹಜವಲ್ಲ. ಇದಕ್ಕೆ ವಿಟಮಿನ್ ಡಿ ಕೊರತೆ ಕಾರಣವಿರಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಕೋಪ ಬರುವುದಕ್ಕೂ ವಿಟಮಿನ್ ಡಿ ಕೊರತೆಗೂ ಕಾರಣವೇನೆಂದು ನಿಮಗೆ ಅಚ್ಚರಿಯಾಗಬಹುದು. ಸಾಮಾನ್ಯವಾಗಿ ವಿಟಮಿನ್ ಡಿ ಕೊರತೆ ನಮ್ಮ ದೇಹದ ಚೈತನ್ಯ ಕಳೆದುಕೊಳ್ಳುವಂತೆ ಮಾಡುತ್ತದೆ. ನಾವು ಲವ ಲವಿಕೆಯಿಂದಿರಬೇಕಾದರೆ ವಿಟಮಿನ್ ಡಿ ಅಂಶ ದೇಹಕ್ಕೆ ಸಾಕಷ್ಟು ಒದಗುತ್ತಿರಬೇಕು.
ವಿಟಮಿನ್ ಡಿ ಕೊರತೆಯಾದಾಗ ನಾವು ಬೇಗನೇ ಸುಸ್ತಾಗುತ್ತೇವೆ. ದೇಹದ ಚೈತನ್ಯ ಕಳೆದುಕೊಳ್ಳುತ್ತೇವೆ. ಈ ಸಂದರ್ಭದಲ್ಲಿ ಸಣ್ಣ ಪುಟ್ಟ ವಿಚಾರಕ್ಕೂ ಸಿಡುಕುವ ಅಭ್ಯಾಸ ತಾನಾಗಿಯೇ ಬರುತ್ತದೆ. ಮನುಷ್ಯ ದೈಹಿಕವಾಗಿ ಸುಸ್ತಾದಾಗ ತಾಳ್ಮೆ ಕಳೆದುಕೊಳ್ಳುವುದು ಸಹಜ ಪ್ರಕ್ರಿಯೆಯಾಗಿದೆ ಎಂಬುದು ಆರೋಗ್ಯ ತಜ್ಞರ ಅಭಿಮತ.