ಭಾರತದ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ನೀರಜ್ ಚೋಪ್ರಾ ಈಗ ಎಲ್ಲೆಡೆ ಮನೆ ಮಾತಾಗಿದ್ದಾರೆ. ಶನಿವಾರ ಟೋಕಿಯೋ ಒಲಿಂಪಿಕ್ಸ್ನ ಕ್ರೀಡಾಕೂಟದ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ, ಭಾರತೀಯರ ಮನಸ್ಸನ್ನೂ ಗೆದ್ದಿದ್ದಾರೆ. ಪುರುಷರ ಜಾವೆಲಿನ್ ಥ್ರೋ ಅಂತಿಮ ಸುತ್ತಿನಲ್ಲಿ 87.58 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ನೀರಜ್ ಚೋಪ್ರಾ ಭಾರತಕ್ಕೆ ಚೊಚ್ಚಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಇದರಿಂದಾಗಿ ಭಾರತದ ಕೀರ್ತಿ ಉತ್ತುಂಗಕ್ಕೆ ಏರಿದೆ.
ಸದ್ಯ ದೇಶದೆಲ್ಲೆಡೆ ಮನೆ ಮಾತಾಗಿರುವ ಅಥ್ಲೀಟ್ ನೀರಜ್ ಚೋಪ್ರಾ ಅವರಿಗೆ ಗೋಲ್ಗಪ್ಪಾ ಅಂದ್ರೆ ಸಖತ್ ಇಷ್ಟವಂತೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಿರುವಾಗ, ಈ ವಿಷಯವನ್ನು ನೀರಜ್ ಚೋಪ್ರಾ ಹೇಳಿದ್ದಾರೆ. ಫಾಸ್ಟ್ಫುಡ್ಗಳಲ್ಲಿ ಗೋಲ್ ಗಪ್ಪಾ ನನಗೆ ತುಂಬಾ ಇಷ್ಟ. ಇದು ಅಥ್ಲೀಟ್ಗಳಿಗೆ ಯಾವುದೇ ಆರೋಗ್ಯ ಸಮಸ್ಯೆ ಉಂಟು ಮಾಡಲ್ಲ. ಗೋಲ್ಗಪ್ಪಾದಲ್ಲಿ ಹೆಚ್ಚಾಗಿ ನೀರಿನ ಅಂಶವೇ ಇರುವುದರಿಂದ ತಿಂದಾಗ ಹೊಟ್ಟೆ ಸಂಪೂರ್ಣ ತುಂಬಿದ ಅನುಭವವಾಗುತ್ತದೆ. ಪುರಿ ನೋಡಲು ದೊಡ್ಡದಾಗಿ ಕಾಣುತ್ತೆ, ಆದರೆ ಅದಕ್ಕೆ ಬಹಳ ಕಡಿಮೆ ಹಿಟ್ಟನ್ನು ಬಳಸಿರುತ್ತಾರೆ. ಹೀಗಾಗಿ ನಾವು ಗೋಲ್ಗಪ್ಪಾ ತಿಂದಾಗ ಬರೀ ನೀರು ನಮ್ಮ ಹೊಟ್ಟೆಯನ್ನು ಸೇರುತ್ತದೆ. ತಿನ್ನುವಾಗ ಸ್ವಲ್ಪ ಸ್ಪೈಸ್(ಮಸಾಲ) ಎನಿಸುತ್ತೆ. ಆದರೂ ಅದು ಬೇರೆ ವಿಷಯ ಎಂದಿದ್ದಾರೆ.
ಗೋಲ್ಗಪ್ಪಾಗಿಂತ ಎರಡು ರೊಟ್ಟಿಯಲ್ಲಿ ಅಧಿಕ ಹಿಟ್ಟನ್ನು ಬಳಸಿರುತ್ತಾರೆ. ಜಾಸ್ತಿ ಗೋಲ್ಗಪ್ಪಾ ತಿಂದೆ ಎಂದು ಅಂದುಕೊಂಡರೂ ಸಹ, ನಮ್ಮ ಹೊಟ್ಟೆ ಸೇರಿರುವುದು ಬರೀ ನೀರು ಮಾತ್ರ. ಹಾಗಂತ ಅಥ್ಲೀಟ್ಗಳಿಗೆ ನಾನು ಪ್ರತೀ ದಿನ ಗೋಲ್ಗಪ್ಪಾ ತಿನ್ನಿ ಎಂದು ಸಲಹೆ ನೀಡಲ್ಲ. ಒಂದು ಸಲವಾದರೂ ಗೋಲ್ಗಪ್ಪಾ ತಿಂದು ಅದರ ರುಚಿ ಸವಿಯಿರಿ ಎಂದು ಹೇಳುತ್ತೇನೆ ಎಂದು ಇಂಟರ್ವ್ಯೂನಲ್ಲಿ ನೀರಜ್ ಚೋಪ್ರಾ ತಮ್ಮ ಡಯೆಟ್ ಚಾರ್ಟ್ ಬಗ್ಗೆ ಹೇಳಿದ್ದಾರೆ.
ಇನ್ನು, ನೀರಜ್ ಚೋಪ್ರಾ ಅವರು ಪದೇ ಪದೇ ತಿನ್ನುವ ತಿಂಡಿ ಬ್ರೆಡ್ ಮತ್ತು ಆಮ್ಲೆಟ್ ಅಂತೆ. ಹೀಗಂತ ಅವರೇ ಹೇಳಿಕೊಂಡಿದ್ದಾರೆ. ಮತ್ತೊಂದು ಕುತೂಹಲಕಾರಿ ವಿಷಯವೆಂದರೆ, ನೀರಜ್ ಚೋಪ್ರಾ ಸ್ವತಃ ತುಂಬಾ ರುಚಿಯಾಗಿ ವಿಭಿನ್ನ ಖಾದ್ಯಗಳನ್ನು ಮಾಡುತ್ತಾರಂತೆ. ನಮ್ಕೀನ್ ಚಾವಲ್(ಸ್ಪೈಸಿ ರೈಸ್) ಮಾಡುವುದರಲ್ಲಿ ಚೋಪ್ರಾ ಎತ್ತಿದ ಕೈಯಂತೆ. ಜನರು ಇದನ್ನು ವೆಜ್ ಬಿರಿಯಾನಿ ಎಂದು ಕರೆಯುತ್ತಾರೆ. ಈ ಡಿಶ್ನ್ನು ನಾನು ತುಂಬಾ ಚೆನ್ನಾಗಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಟೂರ್ನಮೆಂಟ್ಸ್ ಇದ್ದಾಗ ನೀರಜ್ ಚೋಪ್ರಾ ಹೆಚ್ಚಾಗಿ ಸಲಾಡ್ಸ್ ಅಥವಾ ಹಣ್ಣುಗಳನ್ನು ತಿನ್ನುತ್ತಾರಂತೆ. ಜೊತೆಗೆ ಗ್ರಿಲ್ಲ್ಡ್ ಚಿಕನ್ ಬ್ರೀಸ್ಟ್ ಮತ್ತು ಮೊಟ್ಟೆಗಳನ್ನು ತಿನ್ನಲು ಇಷ್ಟಪಡುತ್ತಾರಂತೆ.
ನೀರಜ್ ಚೋಪ್ರಾ ಅವರಿಗೆ ಮನೆಯಲ್ಲಿ ಮಾಡುವ ಚೀಟ್ ಮೀಲ್ ಅಂದ್ರೆ ಇನ್ನೂ ತುಂಬಾ ಇಷ್ಟವಂತೆ (ರೊಟ್ಟಿಗೆ ಸಕ್ಕರೆ ಮತ್ತು ತುಪ್ಪವನ್ನು ಹಾಕಿಕೊಂಡು ತಿನ್ನುವುದು). ಚೋಪ್ರಾ ತಾಯಿ ಸರೋಜಾ ಮಗನ ಬರುವಿಕೆಗಾಗಿ ಕಾಯುತ್ತಿದ್ದಾರಂತೆ. ಅವರು ಟೋಕಿಯೋದಿಂದ ಬಂದ ಕೂಡಲೇ ಚೋಪ್ರಾಗೆ ಇಷ್ಟವಾಗುವ ಅಡುಗೆ ಚುರ್ಮಾವನ್ನು ಮಾಡಿ ಉಣಬಡಿಸುತ್ತಾರಂತೆ.