ಬೆಂಗಳೂರು: ಚಿನ್ನ ಕಳ್ಳಸಾಗಣಿಕೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಬಂಧನ ಪ್ರಕರಣ ಈಗ ಸದ್ದು ಮಾಡುತ್ತಿದೆ. ಹಾಗಿದ್ದರೆ ದುಬೈನಿಂದಲೇ ಚಿನ್ನ ಕಳ್ಳಸಾಗಣಿಕೆ ಮಾಡಿ ಭಾರತಕ್ಕೆ ತರುವುದು ಯಾಕೆ, ಕಾನೂನು ಪ್ರಕಾರ ಎಷ್ಟು ಚಿನ್ನ ತರಬಹುದು ಇಲ್ಲಿದೆ ವಿವರ.
ಭಾರತೀಯರಿಗೆ ದುಬೈನಿಂದ ಕಾನೂನಾತ್ಮಕವಾಗಿ ಚಿನ್ನ ತರಲು ನಿರ್ದಿಷ್ಟ ಮಿತಿಯಿದೆ. ಮಿತಿ ಮೀರಿದರೆ ಸುಂಕ ಪಾವತಿಸಬೇಕಾಗುತ್ತದೆ. ಭಾರತಕ್ಕೆ ಹೋಲಿಸಿದರೆ ದುಬೈನಲ್ಲಿ ಚಿನ್ನದ ಬೆಲೆ ಅರ್ಧಕ್ಕರ್ದಷ್ಟು ಕಡಿಮೆ. ಇದೇ ಕಾರಣಕ್ಕೆ ಹಲವರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕಣ್ತಪ್ಪಿಸಿ ಚಿನ್ನ ಕಳ್ಳಸಾಗಣಿಕೆ ಮಾಡಲು ಯತ್ನಿಸುತ್ತಾರೆ.
ಸುಂಕವಿಲ್ಲದೇ ಎಷ್ಟು ತರಬಹುದು?
ಕಸ್ಟಮ್ಸ್ ಇಲಾಖೆಯ ನಿಯಮಗಳ ಪ್ರಕಾರ ಸುಂಕವಿಲ್ಲದೇ ಓರ್ವ ಪುರುಷ 20 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಶುಲ್ಕವಿಲ್ಲದೇ ತರಬಹುದು. ಮಹಿಳೆಯಾಗಿದ್ದರೆ 40 ಗ್ರಾಂ ತರಲು ಅವಕಾಶವಿದೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಆಭರಣ ಅಥವಾ ಉಡುಗೊರೆ ರೂಪದಲ್ಲಿ 40 ಗ್ರಾಂ ಚಿನ್ನ ತರಲು ಅವಕಾಶವಿದೆ. ಇದಕ್ಕೆ ಆಯಾ ವ್ಯಕ್ತಿಗಳು ಸೂಕ್ತ ಗುರುತಿನ ಚೀಟಿ, ದಾಖಲೆಯನ್ನು ಕಡ್ಡಾಯವಾಗಿ ತೋರಿಸಬೇಕು.
ಭಾರತೀಯರು ದುಬೈನಿಂದ 1 ಕೆ.ಜಿ. ಚಿನ್ನವನ್ನೂ ತರಬಹುದು. ಆದರೆ ಇದಕ್ಕೆ ಸುಂಕ ಅನ್ವಯಿಸುತ್ತದೆ. ಕಸ್ಟಮ್ಸ್ ಮುಕ್ತ ಮಿತಿಯನ್ನು ಮೀರಿದ ಚಿನ್ನವನ್ನು ಕರ್ತವ್ಯ ಎಂದು ಘೋಷಿಸಬೇಕು ಮತ್ತು ವಿಮಾನ ನಿಲ್ದಾಣದಲ್ಲಿ ರೆಡ್ ಚಾನೆಲ್ ಮೂಲಕ ರವಾನಿಸಬೇಕು.
ಕಸ್ಟಮ್ಸ್ ಸುಂಕ ಹೀಗಿರುತ್ತದೆ
ಪುರುಷರಿಗೆ 50 ಗ್ರಾಂವರೆಗೆ ಚಿನ್ನಕ್ಕೆ ಶೇ.3 ರಷ್ಟು ಸುಂಕ ತಗುಲುತ್ತದೆ. 50-100 ಗ್ರಾಂ ಚಿನ್ನಕ್ಕೆ ಶೇ.6 ರಷ್ಟು ಸುಂಕ ಮತ್ತು 100 ಗ್ರಾಂಗಿತ ಹೆಚ್ಚು ಚಿನ್ನಕ್ಕೆ ಶೇ.10 ರಷ್ಟು ಸುಂಕ ಪಾವತಿಸಬೇಕು.
ಮಹಿಳೆಯರು ಮತ್ತು ಮಕ್ಕಳು: 100 ಗ್ರಾಂವರೆಗೆ ಶೇ.3, 100-200 ಗ್ರಾಂಗೆ ಶೇ.6, 200 ಗ್ರಾಂಗಿಂತ ಹೆಚ್ಚು ಚಿನ್ನಕ್ಕೆ ಶೇ.10 ರಷ್ಟು ಸುಂಕ ತೆರಬೇಕು.
ಪ್ರಯಾಣ ಮಾಡುವಾಗ ಚಿನ್ನಕ್ಕೆ ಅಗತ್ಯ ದಾಖಲೆಗಳನ್ನು ಒದಗಿಸಬೇಕು. ದುಬೈ ಚಿನ್ನ ಅಗ್ಗದ ಜೊತೆಗೆ ಪರಿಶುದ್ಧತೆಗೆ ಹೆಸರುವಾಸಿಯಾಗಿದೆ. ಇದೇ ಕಾರಣಕ್ಕೆ ದುಬೈಗೆ ಹೋದವರು ಚಿನ್ನದ ಆಭರಣಗಳನ್ನು ಖರೀದಿ ಮಾಡಲು ಬಯಸುತ್ತಾರೆ.