ನವದೆಹಲಿ: ಇಂಡಿಯಾ ಒಕ್ಕೂಟದ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಸುದರ್ಶನ ರೆಡ್ಡಿ ಅವರನ್ನು ಘೋಷಣೆ ಮಾಡಲಾಗಿದೆ. ಅಷ್ಟಕ್ಕೂ ಈ ಸುದರ್ಶನ ರೆಡ್ಡಿ ಯಾರು? ಅವರ ಹಿನ್ನಲೆಯೇನು ಇಲ್ಲಿದೆ ವಿವರ.
ಆಡಳಿತಾರೂಢ ಎನ್ ಡಿಎ ಅಭ್ಯರ್ಥಿಯಾಗಿ ಈಗಾಗಲೇ ಮಹಾರಾಷ್ಟ್ರದ ಹಾಲಿ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಹೆಸರು ಘೋಷಣೆಯಾಗಿದೆ. ಇದೀಗ ಇಂಡಿಯಾ ಒಕ್ಕೂಟ ಒಗ್ಗಟ್ಟಾಗಿ ತಮ್ಮ ಅಭ್ಯರ್ಥಿಯನ್ನು ಘೋಷಣೆ ಮಾಡಿವೆ.
ಜಸ್ಟಿಸ್ ಸುದರ್ಶನ ರೆಡ್ಡಿ ಮೂಲತಃ ಆಂಧ್ರಪ್ರದೇಶದವರು. 1946 ರಲ್ಲಿ ಜನಿಸಿದ ಅವರು 1971 ರಲ್ಲಿ ಆಂಧ್ರಪ್ರದೇಶದಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ಮೂಲತಃ ಕೃಷಿಕರ ಕುಟುಂಬದಿಂದ ಬಂದ ಅವರು ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದರು.
ಆಂಧ್ರಪ್ರದೇಶ ಹೈಕೋರ್ಟ್ ನಲ್ಲಿ ಸರ್ಕಾರೀ ವಕೀಲರಾಗಿ ಕಾರ್ಯನಿರ್ವಹಿಸಿದ ಅವರು ಭಾರತ ಸರ್ಕಾರದ ಹೆಚ್ಚುವರಿ ಸ್ಥಾಯಿ ವಕೀಲರಾಗಿಯೂ ಸೇವೆ ಸಲ್ಲಿಸಿದ್ದರು. 1993 ರಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ನ ನ್ಯಾಯಾಧೀಶರಾದರು. 2005 ರಲ್ಲಿ ಗುವಾಹಟಿ ಮುಖ್ಯ ನ್ಯಾಯಾಧೀಶರಾದರು. 2007 ರಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡರು. 2011 ರಲ್ಲಿ ಅವರು ನ್ಯಾಯಾಧೀಶರಾಗಿ ನಿವೃತ್ತರಾದರು. ಬಳಿಕ 2013 ರಲ್ಲಿ ಗೋವಾದ ಮೊದಲ ಲೋಕಾಯುಕ್ತರಾಗಿ ಸೇವೆ ಸಲ್ಲಿಸಿದ ಖ್ಯಾತಿ ಅವರದ್ದು. ಇದೀಗ ಇಂಡಿಯಾ ಒಕ್ಕೂಟದ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದಾರೆ.