ಪಾಟ್ನಾ: ಬಿಹಾರದ ಆರ್ ಜೆಡಿ ಪಕ್ಷದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಶೂ ಹಾಕಿಕೊಂಡೇ ಹೋಮದಲ್ಲಿ ಪಾಲ್ಗೊಂಡ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸಾಕಷ್ಟು ಜನ ಟೀಕೆ ಮಾಡಿದ್ದಾರೆ.
ಇದೀಗ ಬಿಹಾರದಲ್ಲಿ ಚುನಾವಣೆ ಪರ್ವ ತಾರಕಕ್ಕೇರಿದೆ. ಮೇವು ಹಗರಣದ ಆರೋಪಿಯಾಗಿರುವ ಲಾಲೂ ಪ್ರಸಾದ್ ಯಾದವ್ ಅನಾರೋಗ್ಯದ ನೆಪದಲ್ಲಿ ಬೇಲ್ ಪಡೆದು ಹೊರಗಿದ್ದಾರೆ. ಮೊನ್ನೆಯಷ್ಟೇ ರಾಹುಲ್ ಗಾಂಧಿ ಜೊತೆ ಮತಗಳ್ಳತನ ವಿರುದ್ಧದ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಇದೀಗ ಲಾಲೂ ಯಾದವ್ ಹೋಮ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಹೋಮ ಕುಂಡದ ಮುಂದೆ ಲಾಲೂ ಯಾದವ್ ಶೂ ಹಾಕಿ ಕುರ್ಚಿ ಮೇಲೆ ಕುಳಿತಿದ್ದಾರೆ. ಅವರ ಸಹಾಯಕರು ಹವಿಸ್ಸಿನ ಹಿಡಿದು ನಿಂತಿದ್ದಾರೆ.
ಲಾಲೂ ಕೂತಲ್ಲಿಂದಲೇ ಹೋಮ ಕುಂಡಕ್ಕೆ ಪೂಜೆ ಮಾಡುತ್ತಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೇ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆ ಬರುತ್ತಿದ್ದಂತೇ ಇವರ ಪೂಜೆಗಳ ನಾಟಕ ಶುರುವಾಗುತ್ತದೆ. ನಿಜವಾಗಿಯೂ ಸನಾತನ ಧರ್ಮಕ್ಕೆ ಗೌರವ ನೀಡಿ ಪೂಜೆ ಮಾಡುತ್ತಿದ್ದರೆ ಶೂ ಹಾಕಿಕೊಂಡು ಪೂಜೆ ಮಾಡಲ್ಲ. ಇದೆಲ್ಲಾ ನಾಟಕ ಎಂದು ಇಲ್ಲೇ ಗೊತ್ತಾಗುತ್ತದೆ ಎಂದಿದ್ದಾರೆ.