ನವದೆಹಲಿ: ಮತಗಳ್ಳತನದ ವಿರುದ್ಧ ಬಿಹಾರದಲ್ಲಿ ನಡೆದ ಸಮಾವೇಶದಲ್ಲಿ ಭಾಷಣ ಮಾಡಿದ ಲಾಲೂ ಪ್ರಸಾದ್ ಯಾದವ್ ಕಳ್ಳರನ್ನು ಓಡಿಸಿ ಎಂದಿದ್ದಾರೆ. ಅವರ ಭಾಷಣಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಈ ಮಾತು ಹೇಳಲು ಸರಿಯಾದ ವ್ಯಕ್ತಿ ಬಿಡಿ ಎಂದು ವ್ಯಂಗ್ಯ ಮಾಡಿದ್ದಾರೆ.
ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಜೊತೆ ಬಿಹಾರದ ಮತ ಪರಿಷ್ಕರಣೆ ವಿರೋಧಿ ಸಮಾವೇಶದಲ್ಲಿ ವೇದಿಕೆ ಹಂಚಿಕೊಂಡ ಲಾಲೂ ಪ್ರಸಾದ್ ಯಾದವ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮತಗಳ್ಳರನ್ನು ಓಡಿಸಿ ಎಂದರು.
ಕಳ್ಳರನ್ನು ಓಡಿಸಿ, ಬಿಜೆಪಿಯನ್ನು ತೊಲಗಿಸಿ ಮತ್ತು ನಮ್ಮನ್ನು ಗೆಲ್ಲಿಸಿ ಎಂದರು. ನಾವೆಲ್ಲರೂ ಒಟ್ಟಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು. ಇದಕ್ಕಾಗಿ ವಿಪಕ್ಷಗಳೆಲ್ಲವೂ ಒಗ್ಗಟ್ಟಾಗಬೇಕು. ಪ್ರಜಾಪ್ರಭುತ್ವ ಉಳಿಸಲು ನಾವು ಒಂದಾಗಬೇಕು ಎಂದಿದ್ದಾರೆ.
ಅವರ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್ ಆಗಿದೆ. ಎಲ್ಲರಿಗೂ ಗೊತ್ತಿರುವ ಹಾಗೆ ಲಾಲೂ ಪ್ರಸಾದ್ ಯಾದವ್ ಮೇವು ಹಗರಣದಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ ಮಾಡಿದ ಆರೋಪಕ್ಕೊಳಗಾದವರು. ಜೈಲು ಶಿಕ್ಷೆಗೂ ಒಳಗಾದವರು. ಈಗ ಅನಾರೋಗ್ಯದ ನೆಪದಲ್ಲಿ ಜಾಮೀನು ಪಡೆದು ಹೊರಗಿದ್ದಾರೆ. ಅಂತಹವರು ಈಗ ಕಳ್ಳರನ್ನು ಓಡಿಸಿ ಎನ್ನುತ್ತಿರುವುದು ವಿಪರ್ಯಾಸವೇ ಸರಿ ಎಂದು ನೆಟ್ಟಿಗರು ಹೇಳಿದ್ದಾರೆ. ಹಾಗಿದ್ರೆ ನೀವ್ಯಾಕೆ ಜೈಲಿಗೆ ಹೋಗಿದ್ರಿ? ಎಂದು ಪ್ರಶ್ನೆ ಮಾಡಿದ್ದಾರೆ.