Select Your Language

Notifications

webdunia
webdunia
webdunia
webdunia

ಕರ್ನಾಟಕ ಸ್ವರಾಜ್ಯ ಪಕ್ಷ ಸೇರಿದಂತೆ ದೇಶದ 334 ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಬಿಗ್‌ ಶಾಕ್‌

Central Election Commission, Karnataka Swarajya Party, Bihar Assembly Elections

Sampriya

ನವದೆಹಲಿ , ಭಾನುವಾರ, 10 ಆಗಸ್ಟ್ 2025 (11:31 IST)
Photo Credit X
ನವದೆಹಲಿ: ರಾಜ್ಯದ 12 ಸೇರಿದಂತೆ ಒಟ್ಟು 334 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಶಾಕ್‌ ನೀಡಿದೆ. ಈ ಪಕ್ಷಗಳನ್ನು ಆಯೋಗವು ತನ್ನ ಪಟ್ಟಿಯಿಂದ ಕೈಬಿಟ್ಟಿದೆ.

2019ರಿಂದ ಇದುವರೆಗಿನ ಆರು ವರ್ಷಗಳ ಅವಧಿಯಲ್ಲಿ ಈ ಪಕ್ಷಗಳು ಒಂದೇ ಒಂದು ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ನೋಂದಾಯಿಸಿಕೊಂಡಿರುವ ವಿಳಾಸದಲ್ಲಿಯೂ ಈ ಪಕ್ಷಗಳ ಕಚೇರಿಯೂ ಪತ್ತೆಯಾಗಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎನ್ನುವ ಷರತ್ತನ್ನು ಈ ಪಕ್ಷಗಳು ಪಾಲಿಸಿಲ್ಲ ಎಂದು ಆಯೋಗ ತಿಳಿಸಿದೆ.

ರಾಜ್ಯದಲ್ಲಿದ್ದ ಅಂಬೇಡ್ಕರ್‌ ಜನತಾ ಪಕ್ಷ, ಭಾರತೀಯ ಪ್ರಜಾ ಪಕ್ಷ, ಜನ ಸ್ವರಾಜ್ಯ ಪಕ್ಷ, ಕಲ್ಯಾಣ ಕ್ರಾಂತಿ ಪಕ್ಷ, ಕರ್ನಾಟಕ ಪ್ರಜಾ ವಿಕಾಸ್‌ ಪಕ್ಷ, ಕರ್ನಾಟಕ ಸ್ವರಾಜ್ಯ ಪಕ್ಷ, ಮಹಿಳಾ ಪ್ರಧಾನ ಪಕ್ಷ, ನಮ್ಮ ಕಾಂಗ್ರೆಸ್‌, ಪ್ರಜಾ ರೈತ ರಾಜ್ಯ ಪಕ್ಷ, ರಕ್ಷಕ ಸೇನಾ, ಸಮನ್ಯಾ ಜನತಾ ಪಕ್ಷ (ಲೋಕ ತಾಂತ್ರಿಕ್‌), ವಿಚಾರ ಜಾಗೃತಿ ಕಾಂಗ್ರೆಸ್‌ ಪಕ್ಷಗಳನ್ನು ಆಯೋಗ ಕೈಬಿಟ್ಟಿದೆ.

ಶೀಘ್ರದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿರುವ ಬಿಹಾರದಲ್ಲೂ ಭಾರತೀಯ ಹಿಂದುಳಿದ ಪಕ್ಷ, ಬಿಹಾರ ಜನತಾ ಪಕ್ಷ ಮತ್ತು ಗಾಂಧಿ ಪ್ರಕಾಶ್‌ ಪಕ್ಷ ಸೇರಿದಂತೆ 17 ಪಕ್ಷಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ.

ಉತ್ತರ ಪ್ರದೇಶದಲ್ಲಿನ 115 ಪಕ್ಷಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ದೆಹಲಿ 27, ತಮಿಳುನಾಡು 22, ಹರಿಯಾಣ 21, ಮಧ್ಯಪ್ರದೇಶ 15, ತೆಲಂಗಾಣ 13 ಹಾಗೂ ಗುಜರಾತ್‌ನ 11 ಪಕ್ಷಗಳನ್ನು ಆಯೋಗವು ಪಟ್ಟಿಯಿಂದ ಕೈಬಿಟ್ಟಿದೆ.

ಅಸ್ತಿತ್ವದಲ್ಲಿದ್ದ 2,854 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ (ಆರ್‌ಯುಪಿಪಿ) ಪೈಕಿ, ಪರಿಷ್ಕರಣೆಯ ಬಳಿಕ 2,520 ಪಕ್ಷಗಳು ಪಟ್ಟಿಯಲ್ಲಿ ಉಳಿದಿವೆ. ಪ್ರಸ್ತುತ ಆರು ರಾಷ್ಟ್ರೀಯ ಪಕ್ಷಗಳು ಹಾಗೂ 67 ರಾಜ್ಯ ಪಕ್ಷಗಳಿವೆ.

 2022ರಲ್ಲಿ ನಡೆದ ಪರಿಷ್ಕರಣೆಯಲ್ಲಿ 537 ಪಕ್ಷಗಳ ಪೈಕಿ 284 ಪಕ್ಷಗಳನ್ನು ಪಟ್ಟಿಯಿಂದ ಕೈಬಿಡಲಾಗಿತ್ತು. ಇದು ನಿರಂತರ ಪ್ರಕ್ರಿಯೆ ಎಂದು ಆಯೋಗ ತಿಳಿಸಿದೆ.

ಚುನಾವಣಾ ಆಯೋಗವು ನಿಷ್ಕ್ರಿಯ ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ ಪಟ್ಟಿಯನ್ನು 2001ರಿಂದ ಇಲ್ಲಿಯವರೆಗೆ ಮೂರರಿಂದ ನಾಲ್ಕು ಬಾರಿ ಪರಿಷ್ಕರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಣ ಅಕ್ರಮ ವರ್ಗಾವಣೆ ತಡೆಗಟ್ಟುವಿಕೆ ಕಾಯ್ದೆ ಹಾಗೂ ಆದಾಯ ತೆರಿಗೆಯ ಕಾನೂನುಗಳನ್ನು ಪಟ್ಟಿಯಿಂದ ಕೈಬಿಡಲಾದ ಬಹುತೇಕ ಪಕ್ಷಗಳು ಉಲ್ಲಂಘಿಸಿವೆ. ಆಕ್ಷೇಪಣೆ ಸಲ್ಲಿಸಲು 30 ದಿನ ಕಾಲಾವಕಾಶ ನೀಡಿದ ನಂತರವೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಯೋಗ ತಿಳಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ರಾಜಧಾನಿಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ: ಮುಂದಿನ 48 ಗಂಟೆ ಭಾರೀ ಮಳೆಯ ಮುನ್ಸೂಚನೆ