ನವದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ಹೈಕಮಾಂಡ್ ರೇಖಾ ಗುಪ್ತಾರನ್ನು ಆಯ್ಕೆ ಮಾಡಿದೆ. ರೇಖಾ ಗುಪ್ತಾ ಯಾರು ಅವರ ಹಿನ್ನಲೆಯೇನು ಇಲ್ಲಿದೆ ವಿವರ.
ಪ್ರಸಕ್ತ ಬಿಜೆಪಿ ಆಡಳಿತವಿರುವ ರಾಜ್ಯಗಳ ಪೈಕಿ ಯಾರೂ ಮಹಿಳಾ ಸಿಎಂ ಇಲ್ಲ. ಈಗ ರೇಖಾ ಗುಪ್ತಾ ಮೊದಲ ಮಹಿಳಾ ಸಿಎಂ ಆಗಿದ್ದಾರೆ. ದೇಶದ 18 ನೇ ಮಹಿಳಾ ಸಿಎಂ ಆಗಿ ರೇಖಾ ಗುಪ್ತಾ ಅಧಿಕಾರ ಸ್ವೀಕರಿಸಲಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಶಾಸಕಿಯಾಗಿರುವ ರೇಖಾ ಗುಪ್ತಾಗೆ ಅದೃಷ್ಟ ಖುಲಾಯಿಸಿದೆ. ಇಷ್ಟು ದಿನ ಅವರ ಹೆಸರು ಚಾಲ್ತಿಯಲ್ಲೇ ಇರಲಿಲ್ಲ. ಈ ಮೂಲಕ ಬಿಜೆಪಿ ಅಚ್ಚರಿಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ.
50 ವರ್ಷದ ರೇಖಾ ಹರ್ಯಾಣ ಮೂಲದವರು. ದೆಹಲಿ ವಿವಿಯಲ್ಲಿ ಬಿಜೆಪಿ ವಿದ್ಯಾರ್ಥಿ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸಿದ್ದರು. ದೆಹಲಿ ಬಿಜೆಪಿಯ ಮಹಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅನುಭವಿ.
ವೈಯಕ್ತಿಕವಾಗಿಯೂ ರೇಖಾ ಗುಪ್ತಾ ವಿದ್ಯಾವಂತೆ. ದೆಹಲಿ ವಿವಿಯಲ್ಲಿ ಪದವಿ ಮುಗಿಸಿದ ಅವರು ಐಎಂಐಆರ್ ಸಿ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ. 1996 ರಿಂದ ಬಿಜೆಪಿಯಲ್ಲಿ ಸಕ್ರಿಯರಾಗಿರುವ ರೇಖಾ ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದರು. ರೇಖಾ ವಿವಾಹಿತೆಯಾಗಿದ್ದು ಪತಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಈಗ ಅವರಿಗೆ ಮುಖ್ಯಮಂತ್ರಿ ಸ್ಥಾನ ಒಲಿದಿದೆ.