Publish Date: Wed, 15 Jul 2026 (09:58 IST)
Updated Date: Wed, 15 Jul 2026 (10:07 IST)
ರಾಂಚಿ (ಜಾರ್ಖಂಡ್): ದೇವರ ಭಕ್ತಿಯಲ್ಲಿ ಲೀನವಾಗಿ ಪೂಜೆ ಸಲ್ಲಿಸುತ್ತಿದ್ದ ವೇಳೆಯೇ ಅರ್ಚಕರೊಬ್ಬರು ದೇವರ ಪಾದದ ಬಳಿಯೇ ಇಹಲೋಕ ತ್ಯಜಿಸಿದ ಅತ್ಯಂತ ಹೃದಯವಿದ್ರಾವಕ ಹಾಗೂ ಭಾವುಕ ಘಟನೆಯೊಂದು ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ನಡೆದಿದೆ.
ರಾಂಚಿಯ ಪ್ರಸಿದ್ಧ ದೇವಾಲಯವೊಂದರಲ್ಲಿ ಸಂಜೆಯ ಆರತಿ ನೆರವೇರಿಸುತ್ತಿದ್ದ ಪ್ರಖ್ಯಾತ ಅರ್ಚಕ ಆಚಾರ್ಯ ರಜನಿ ಕಾಂತ್ ಮಿಶ್ರಾ ಅವರು ಶಂಖ ನಾದ ಹಾಗೂ ಡಮರು ಬಾರಿಸುತ್ತಾ ಪೂಜೆಯಲ್ಲಿ ಮಗ್ನರಾಗಿದ್ದಾಗ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.
ಘಟನೆಯ ದೃಶ್ಯಾವಳಿ:
ಆರತಿ ಬೆಳಗುವಾಗಲೇ ಕುಸಿದು ಬಿದ್ದ ಅರ್ಚಕ: ಸಂಜೆಯ ಮಹಾ ಆರತಿ ವೇಳೆಯಲ್ಲಿ ನೂರಾರು ಭಕ್ತರು ಜಮಾಯಿಸಿದ್ದರು. ಮಂತ್ರ ಘೋಷಗಳು, ಶಂಖ ನಾದ ಹಾಗೂ ಡಮರುಗ ಜಾಗಟೆಯ ಶಬ್ದ ಮುಗಿಲು ಮುಟ್ಟಿದ್ದ ವೇಳೆಯಲ್ಲಿ ಆಚಾರ್ಯ ರಜನಿ ಕಾಂತ್ ಮಿಶ್ರಾ ಅವರು ಪೂಜೆ ನಡೆಸುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡು ದೇವರ ಪೀಠದ ಮುಂಭಾಗದಲ್ಲೇ ಕುಸಿದು ಬಿದ್ದಿದ್ದಾರೆ.
ಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ಪ್ರಾಣಪಕ್ಷಿ ಹಾರಿತು: ಕೂಡಲೇ ಅಲ್ಲಿದ್ದ ಭಕ್ತರು ಹಾಗೂ ಬಿಜೆಪಿ ಹಿರಿಯ ನಾಯಕ ರಮೇಶ್ ಸಿಂಗ್ ಸೇರಿದಂತೆ ಸ್ಥಳೀಯರು ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರಾದರೂ, ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಧೃಡಪಡಿಸಿದ್ದಾರೆ.
ತಮ್ಮ ಸರಳ ಸಜ್ಜನಿಕೆ ಹಾಗೂ ದೈವಭಕ್ತಿಗೆ ಹೆಸರಾಗಿದ್ದ ಆಚಾರ್ಯ ರಜನಿ ಕಾಂತ್ ಮಿಶ್ರಾ ಅವರು ದೇವರ ಸೇವೆಯಲ್ಲಿದ್ದಾಗಲೇ ಅಂತಿಮ ಶ್ವಾಸ ಎಳೆದದ್ದು ಭಕ್ತರಲ್ಲಿ ತೀವ್ರ ದುಃಖ ತಂದಿದೆ. ದೇವರಿಗೆ ಆತ್ಮಾರ್ಪಣೆ ಮಾಡಿದಂತಿರುವ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, "ಪುಣ್ಯಾತ್ಮನಿಗೆ ದೇವರ ಪಾದದಲ್ಲೇ ಮುಕ್ತಿ ಸಿಕ್ಕಿದೆ" ಎಂದು ಸಾವಿರಾರು ಜನರು ಕಂಬನಿ ಮಿಡಿದು ಸಂತಾಪ ಸೂಚಿಸುತ್ತಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ