ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕ್ಯಾಚ್ ಹಿಡಿಯುವ ವೇಳೆ ಗಾಯಗೊಂಡಿದ್ದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ.
ಅದೇನೆಂದರೆ ನೆಚ್ಚಿನ ಕ್ರಿಕೆಟಿಗ ಶ್ರೇಯಸ್ ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಪ್ರಸ್ತುತ ಅಯ್ಯರ್ ಅವರು ಸಿಡ್ನಿಯ ಸೇಂಟ್ ವಿನ್ಸೆಂಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವರ ಆರೋಗ್ಯ ಸುಧಾರಿಸುತ್ತಿರುವ ಕಾರಣ ಈ ವಾರದೊಳಗೆ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಶ್ರೇಯಸ್ ಅಯ್ಯರ್ ತಂದೆ ಸಂತೋಷ್ ಅಯ್ಯರ್ ದೃಢಪಡಿಸಿದ್ದಾರೆ.
ಬಿಸಿಸಿಐ ವೈದ್ಯಕೀಯ ತಂಡವು ಅವರ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಅವರಿಗೆ ಸಿಡ್ನಿಯ ಅತ್ಯುತ್ತಮ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಒಂದು ವಾರದೊಳಗೆ ಅವರನ್ನು ಡಿಸ್ಚಾರ್ಜ್ ಮಾಡುವ ಸಾಧ್ಯತೆಯಿದೆ. ಸಾಧ್ಯವಾದರೆ, ಅದಕ್ಕೂ ಮೊದಲೇ ಮನೆಗೆ ಮರಳಬಹುದು. ಅಯ್ಯರ್ ಅವರು ಟಿ20 ತಂಡದ ಭಾಗವಾಗಿರದ ಕಾರಣ ಅವರು ನೇರವಾಗಿ ಮನೆಗೆ ಬರಲಿದ್ದಾರೆ. ಆದ್ದರಿಂದ ನಾವು ಸಿಡ್ನಿಗೆ ಹೋಗುವ ನಿರ್ಧಾರವನ್ನು ಬದಲಾಯಿಸಿದ್ದೇವೆ. ನಾವು ಅಲ್ಲಿಗೆ ಹೋಗುತ್ತಿಲ್ಲ ಎಂದು ಸಂತೋಷ್ ಅಯ್ಯರ್ ಡೆಕ್ಕನ್ ಕ್ರಾನಿಕಲ್‌ಗೆ ತಿಳಿಸಿದ್ದಾರೆ.