Publish Date: Tue, 28 Oct 2025 (18:25 IST)
Updated Date: Tue, 28 Oct 2025 (18:28 IST)
ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣ ಸಂಬಂಧ ಎಸ್‌ಐಟಿ ವಿಚಾರಣೆಗೆ 7 ದಿನಗಳೊಳಗೆ ಹಾಜರಗಬೇಕೆಂದು ನಾಲ್ಕು ಮಂದಿಗೆ ಅಧಿಕಾರಿಗಳು ಸೂಚಿಸಿದ್ದಾರೆ.
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ವಿಚಾರಣೆಗೆ ಹಾಜರಾಗಲು ಕಾಲಾವಾಕಾಶ ಕೋರಿದ್ದ ನಾಲ್ಕು ಮಂದಿಗೆ ಎಸ್.ಐ.ಟಿ ಅಧಿಕಾರಿಗಳು ಕಾಲಾವಕಾಶ ನೀಡಿದ್ದಾರೆ.
ಧರ್ಮಸ್ಥಳ ಸುತ್ತಮುತ್ತಲಿನ ಪ್ರಕರಣದಲ್ಲಿ ಅ.27 ರಂದು ಐದು ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್ ನೀಡಿತ್ತು. ಅದರಂತೆ ಸುಜಾತ ಭಟ್ ಮಾತ್ರ ಅ.27 ರಂದು ವಿಚಾರಣೆಗೆ ಹಾಜರಾಗಿದ್ದರು. ಉಳಿದ ನಾಲ್ಕು ಮಂದಿ ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ, ಜಯಂತ್ ಟಿ, ಮಹೇಶ್ ಶೆಟ್ಟಿ ತಿಮರೋಡಿ ವಿಚಾರಣೆಗೆ ಹಾಜರಾಗಿಲ್ಲ.
ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಅ.27 ರಂದು ಮಧ್ಯಾಹ್ನ ಬಂದ ನಾಲ್ಕು ಮಂದಿಯ ಪರ ವಕೀಲರಾದ ಅಂಬಿಕಾ ಪ್ರಭು ಎಸ್.ಐ.ಟಿ ವಿಚಾರಣೆಗೆ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು. ಇದೀಗ ಅದರಂತೆ ಅಧಿಕಾರಿಗಳು ಮಹೇಶ್ ಶೆಟ್ಟಿ ತಿಮರೋಡಿಗೆ ಏಳು ದಿನದ ಒಳಗಡೆ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ನೀಡಿದ್ದು, ಉಳಿದಂತೆ ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ, ವಿಠಲ್ ಗೌಡರಿಗೆ ನಾಲ್ಕು ದಿನದ ಒಳಗಡೆ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ನೀಡಲಾಗಿದೆ ಎಂದು ಎಸ್.ಐ.ಟಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.