ನವದೆಹಲಿ: ನದಿ ಸ್ವಚ್ಛತಾ ಜಾಗೃತಿ ಅಭಿಯಾನದ ರೀಲ್ ಮಾಡುವಾಗ ದೆಹಲಿಯ ಬಿಜೆಪಿ ಶಾಸಕ ರವೀಂದರ್ ಸಿಂಗ್ ನೇಗಿ ಯಮುನಾ ನದಿಗೆ ಜಾರಿ ಬಿದ್ದಿದ್ದಾರೆ.
ಛತ್ ಪೂಜಾ ಆಚರಣೆಯ ನಡುವೆ ಯಮುನಾ ನದಿಯ ಸ್ವಚ್ಛತೆಯ ಬಗ್ಗೆ ರಾಜಕೀಯ ಜಟಾಪಟಿ ಮುಂದುವರಿದಿದ್ದು , ಪತ್ಪರ್‌ಗಂಜ್ ಶಾಸಕರು ಜಾರಿ ನೀರಿಗೆ ಬೀಳುತ್ತಿರುವ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ವಿಪಕ್ಷಗಳಿಗೆ ಆಹಾರವಾಗಿದೆ.
ಬಿಜೆಪಿ ನಾಯಕರು ದೇಶದ ಜನರಿಗೆ ಸುಳ್ಳು ಭರವಸೆ ನೀಡುವಲ್ಲಿ ನಿಸ್ಸೀಮರು. ಇದೇ ಅವರ ಯಮುನಾ ನದಿ ಸ್ವಚ್ಛತೆ. ಅವರು ಕ್ಯಾಮರಾಗಷ್ಟೇ ಸೀಮಿತ ಎಂದು ಆಮ್ ಆದ್ಮಿ ಪಕ್ಷದ ಶಾಸಕ ಸಂಜೀವ್ ಝಾ ಅವರು ಎಕ್ಸ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡು ಟೀಕಿಸಿದ್ದಾರೆ.
ಪತ್ಪರ್ಗಂಜ್ ಶಾಸಕರು ಎರಡು ಬಾಟಲಿಗಳನ್ನು ಹಿಡಿದುಕೊಂಡು ನದಿಯ ದಡದಲ್ಲಿ ನಿಂತಿರುವುದು 19 ಸೆಕೆಂಡುಗಳ ವೀಡಿಯೊದಲ್ಲಿ ಕಂಡುಬರುತ್ತದೆ. ಮಂಡಿಯೂರಿ ಕುಳಿತಿದ್ದ ಸ್ಥಾನದಿಂದ ಮೇಲೇಳಲು ಪ್ರಯತ್ನಿಸುತ್ತಿರುವಾಗ, ನೇಗಿ ಸಮತೋಲನ ಕಳೆದುಕೊಂಡು ನೀರಿಗೆ ಜಾರಿ ಬೀಳುತ್ತಾರೆ. ಹತ್ತಿರದ ವ್ಯಕ್ತಿಯೊಬ್ಬರು ಸಹಾಯ ಮಾಡಲು ಧಾವಿಸುತ್ತಾರೆ, ಆದರೆ ಅಷ್ಟರಲ್ಲಾಗಲೇ ಅವರು ನದಿಯ ಒಳಗೆ ಬಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಎಎಪಿ ನಡುವಿನ ರಾಜಕೀಯ ವಾಗ್ವಾದ ತೀವ್ರಗೊಂಡಿದೆ. ಇಂದು ಮುಕ್ತಾಯಗೊಳ್ಳಲಿರುವ ಛತ್ ಪೂಜೆಗೆ ಸಿದ್ಧತೆಗಳ ಮಧ್ಯೆ, ಯಮುನಾ ನದಿಯ ಸ್ಥಿತಿಯ ಬಗ್ಗೆ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಎರಡೂ ಪಕ್ಷಗಳು ಪರಸ್ಪರ ಆರೋಪ ಮಾಡಿಕೊಳ್ಳುತ್ತಿವೆ.