ನವದೆಹಲಿ: ಸೋನಿಯಾ ಗಾಂಧಿ ಅಳಿಯ, ಪ್ರಿಯಾಂಕ ಗಾಂಧಿ ಪತಿ ರಾಬರ್ಟ್ ವಾದ್ರಾ ವಿರುದ್ಧ ಜಾರಿ ನಿರ್ದೇಶನಾಲಯ ಅಕ್ರಮ ಹಣವರ್ಗಾವಣೆ ಪ್ರಕರಣದಲ್ಲಿ ಚಾರ್ಜ್ ಶೀಟ್ ಹಾಕುತ್ತಿದ್ದಂತೇ ಕಾಂಗ್ರೆಸ್ ನಾಯಕರು ಕೇಂದ್ರದ ಮೇಲೆ ಮುಗಿಬಿದ್ದಿದ್ದಾರೆ.
ಹರ್ಯಾಣದ ಶಿಕೋಹ್ ಪುರದಲ್ಲಿನ ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ರಾಬರ್ಟ್ ವಾದ್ರಾ ವಿರುದ್ಧ ಅಕ್ರಮ ಹಣವರ್ಗಾವಣೆ ಮಾಡಿದ ಆರೋಪವಿದೆ. ಈ ಸಂಬಂಧ ಇಡಿ ಸ್ಥಳೀಯ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ. ಈಗಾಗಲೇ 36 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇಡಿ ಜಪ್ತಿ ಮಾಡಿದೆ.
ಇದೀಗ ರಾಬರ್ಡ್ ವಾದ್ರಾ ವಿರುದ್ಧ ಆರೋಪಪಟ್ಟಿ ಸಲ್ಲಿಸುತ್ತಿದ್ದಂತೇ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಇದೆಲ್ಲಾ ಮೋದಿ ಪಿತೂರಿ. ಬೇಕೆಂದೇ ಕಾಂಗ್ರೆಸ್ ನಾಯಕರನ್ನು ಅವರ ಆಪ್ತರನ್ನು ಟಾರ್ಗೆಟ್ ಮಾಡುತ್ತಿದೆ. ಬಹುಶಃ ಇಡಿ ಅಧಿಕಾರಿಗಳಿಗೆ ಮೋದಿ-ಶಾ ಜೋಡಿ ತಿಂಗಳಿಗೆ ಇಷ್ಟು ಕಾಂಗ್ರೆಸ್ ನಾಯಕರ ಮೇಲೆ ದಾಳಿ ಮಾಡಬೇಕು ಎಂದು ಟಾರ್ಗೆಟ್ ನೀಡಿರಬೇಕು ಎಂದು ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ವಾಗ್ದಾಳಿ ನಡೆಸಿದ್ದಾರೆ. ನಮ್ಮನ್ನು ದಮನಿಸುವ ಮೋದಿ ಸರ್ಕಾರದ ಮೋಸದ ಬಲೆ ಎಂದಿಗೂ ಯಶಸ್ವಿಯಾಗಲ್ಲ. ಹರ್ಯಾಣದಲ್ಲಿ ಭೂಮಿ ಖರೀದಿ ವಿಚಾರದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.