ನವದೆಹಲಿ: ಏಳೂವರೆ ಕೋಟಿ ರೂ.ಗೆ ಆಸ್ತಿ ಖರೀದಿ ಮಾಡಿ 55 ಕೋಟಿ ರೂ.ಗೆ ಮಾರಾಟ ಮಾಡಿರುವ ಸೋನಿಯಾ ಗಾಂಧಿ ಅಳಿಯ, ಪ್ರಿಯಾಂಕ ಗಾಂಧಿ ಪತಿ ರಾಬರ್ಟ್ ವಾದ್ರಾಗೆ ಈಗ ಇಡಿ ಡ್ರಿಲ್ ಮಾಡಲು ಮುಂದಾಗಿದೆ.
ರಾಬರ್ಟ್ ವಾದ್ರಾ ವಿರುದ್ಧ ಈಗ ಭೂ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆಗೆ ಸಮನ್ಸ್ ನೀಡಿದೆ. ಹರಿಯಾಣದ ಗುರ್ ಗಾಂವ್ ನಲ್ಲಿ ಕಡಿಮೆ ಬೆಲೆಗೆ ಭೂಮಿ ಖರೀದಿಸಿ ಭಾರೀ ಬೆಲೆಗೆ ಮಾರಾಟ ಮಾಡಿದ ಆರೋಪ ಅವರ ಮೇಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯ ಏಪ್ರಿಲ್ 8 ಕ್ಕೆ ನೋಟಿಸ್ ನೀಡಿತ್ತು. ಆದರೆ ಆ ದಿನ ಅವರು ವಿಚಾರಣೆಗೆ ಗೈರಾಗಿದ್ದರು. ಹೀಗಾಗಿ ಇದೀಗ ಎರಡನೇ ಬಾರಿಗೆ ನೋಟಿಸ್ ನೀಡಲಾಗಿದೆ.
ಇದೀಗ ಎರಡನೇ ಬಾರಿಗೆ ನೋಟಿಸ್ ಬಂದ ಬೆನ್ನಲ್ಲೇ ಅವರು ಇಡಿ ವಿಚಾರಣೆಗೆ ಹಾಜರಾಗಿದ್ದಾರೆ. ಆದರೆ ಇಡಿ ಕಚೇರಿಗೆ ತೆರಳುವಾಗ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು ಇದೆಲ್ಲಾ ಬಿಜೆಪಿಯ ಕುಮ್ಮಕ್ಕು ಎಂದಿದ್ದಾರೆ. ಸರ್ಕಾರದ ವಿರುದ್ಧ ಮಾತನಾಡಿದಾಗಲೆಲ್ಲಾ ನನ್ನ ಮೇಲೆ ಕೇಂದ್ರ ಗೂಬೆ ಕೂರಿಸುವ ಪ್ರಯತ್ನ ನಡೆಸಿದೆ. ಇದೂ ಕೂಡಾ ಅದರದ್ದೇ ಭಾಗವಾಗಿದೆ. ನನಗೆ ಮುಚ್ಚಿಡುವಂತದ್ದು ಏನೂ ಇಲ್ಲ. ಇರುವುದೆಲ್ಲವನ್ನೂ ಹೇಳುತ್ತೇನೆ ಎಂದಿದ್ದಾರೆ.