Select Your Language

Notifications

webdunia
webdunia
webdunia
webdunia

ದಿಢೀರನೆ ಬಡ್ಡಿದರ ಏರಿಸಿ ಆಘಾತ ನೀಡಿದ ಆರ್‌ ಬಿಐ

ದಿಢೀರನೆ ಬಡ್ಡಿದರ ಏರಿಸಿ ಆಘಾತ ನೀಡಿದ ಆರ್‌ ಬಿಐ
bengaluru , ಬುಧವಾರ, 4 ಮೇ 2022 (15:46 IST)
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಹಣಕಾಸು ಮಾರುಕಟ್ಟೆಗೆ   ಆಘಾತ ನೀಡಿದ್ದಾರೆ. ಏಕಾಏಕಿ ರೆಪೋ ದರ 40 ಅಂಶಗಳಷ್ಟು (ಶೇ.0.40)ರಷ್ಟು ಏರಿಕೆ ಮಾಡಿರುವುದಾಗಿ ಘೋಷಿಸಿದ್ದಾರೆ. ಅಲ್ಲದೇ ನಗದು ಮೀಸಲು ದರವನ್ನು (ಸಿಆರ್ ಆರ್) 50 ಅಂಶಗಳಷ್ಟು ( ಶೇ.0.50) ರಷ್ಟು ಏರಿಸಿದ್ದಾರೆ.
ಈಗ ಪರಿಷ್ಕೃತ ರೆಪೊದರ ಶೇ.4.40ಕ್ಕೆ ಮತ್ತು ಸಿಆರ್ ಆರ್ ದರವು 4.5ಕ್ಕೆ ಏರಿದೆ. ತೀವ್ರವಾಗಿ ಏರುತ್ತಿರುವ ಹಣದುಬ್ಬರ ನಿಯಂತ್ರಿಸುವ ಸಲುವಾಗಿ ಬಡ್ಡಿದರ ಏರಿಕೆ ಮಾಡಲಾಗಿದೆ. 2019ರಿಂದೀಚೆಗೆ ಆರ್ಬಿಐ ಇದೇ ಮೊದಲ ಬಾರಿಗೆ ಬಡ್ಡಿದರವನ್ನು ಏರಿಕೆ ಮಾಡಿದೆ. ಇದುವರೆಗೂ ಬಡ್ಡಿದರವು ಐತಿಹಾಸಿಕ ಕನಿಷ್ಟಮಟ್ಟದಲ್ಲೇ ಇತ್ತು.
ಆರ್ಬಿಐ ರೆಪೊದರ ಏರಿಕೆ ಮಾಡಿರುವುದರಿಂದಾಗಿ ಗೃಹಸಾಲ, ವಾಹನಸಾಲ, ವೈಯಕ್ತಿಕ ಸಾಲ ಸೇರಿದಂತೆ ಬಹುತೇಕ ಎಲ್ಲಾ ಸಾಲಗಳ ಮೇಲಿನ ಬಡ್ಡಿದರಗಳೂ ಏರಿಕೆಯಾಗಲಿವೆ. ಗ್ರಾಹಕರು ತಾವು ಸಾಲದ ಮೇಲೆ ಪಾವತಿಸುವ ಇಎಂಐ (ಸಮಾನ ಮಾಸಿಕ ಕಂತುಗಳು) ಮೊತ್ತವು ಹೆಚ್ಚಾಗಲಿದೆ.
ಏಪ್ರಿಲ್ ತಿಂಗಳ ಹಣಕಾಸು ನೀತಿ ಸಮಿತಿ (ಎಂಪಿಸಿ) ಪರಾಮರ್ಶೆ ವೇಳೆ ಬಡ್ಡಿ ಏರಿಕೆ ನಿರೀಕ್ಷಿಸಲಾಗಿತ್ತು. ಆದರೆ, ಬಡ್ಡಿ ಏರಿಕೆ ಮಾಡದೇ ಮಾರುಕಟ್ಟೆಗೆ ಅಚ್ಚರಿ ಮೂಡಿಸಿದ್ದ ಗವರ್ನರ್ ಶಕ್ತಿಕಾಂತ ದಾಸ್, ಈಗ ಏಕಾಏಕಿ ಬಡ್ಡಿದರ ಏರಿಕೆ ಘೋಷಿಸಿದ್ದಾರೆ.
ಸಾಮಾನ್ಯವಾಗಿ ದ್ವೈಮಾಸಿಕ ಹಣಕಾಸು ನೀತಿ ಸಮಿತಿ ಸಭೆಯ ನಂತರ ಬಡ್ಡಿದರ ಏರಿಕೆ ಪ್ರಕಟಿಸಲಾಗುತ್ತದೆ. ವಿಶೇಷ ಸಂದರ್ಭಗಳಲ್ಲಿ ಮಾತ್ರ ಹೀಗೆ ಅನಿರೀಕ್ಷಿತವಾಗಿ ಬಡ್ಡಿದರ ಏರಿಕೆ ಮಾಡಲಾಗುತ್ತದೆ.
ಅಮೆರಿಕದ ಫೆಡರಲ್ ರಿಸರ್ಪ್ (ಕೇಂದ್ರೀಯ ಬ್ಯಾಂಕ್) ಕೂಡಾ ಬಡ್ಡಿ ದರ ಏರಿಸುವ ನಿರೀಕ್ಷೆ ಇದೆ.
ಬಡ್ಡಿದರ ಏರಿಕೆಗೆ ಷೇರು ಮಾರುಕಟ್ಟೆ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿದೆ. ಸೆನ್ಸೆಕ್ಸ್, ನಿಫ್ಟಿ ಮತ್ತು ಬ್ಯಾಂಕ್ ನಿಫ್ಟಿ ಸೂಚ್ಯಂಕಗಳು ಶೇ.1.50ರಿಂದ ಶೇ.2ರಷ್ಟು ಕುಸಿತ ದಾಖಲಿಸಿದವು.
ಕೋವಿಡ್ ಸಂಕಷ್ಟದಿಂದಾಗಿ ಕುಸಿದಿದ್ದ ಆರ್ಥಿಕತೆಗೆ ಚೇತರಿಕೆ ನೀಡುವ ಸಲುವಾಗಿ ಆರ್ಬಿಐ ಬಡ್ಡಿದರಗಳನ್ನು ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಇಳಿಸಿತ್ತು. ಇದುವರೆಗೂ ಬಡ್ಡಿದರ ಏರಿಕೆ ಮಾಡಿಲಿಲ್ಲ. ಈ ನಡುವೆ ಹಣದುಬ್ಬರವು ಅನಿರೀಕ್ಷಿತವಾಗಿ ತ್ವರಿತವಾಗಿ ಜಿಗಿದಿದೆ. ಆರ್ಬಿಐ ಮಿತಿಯಾದ ಗರಿಷ್ಠ ಶೇ.6ರಷ್ಟು ದಾಟಿ ಹೋಗಿದೆ. ಮತ್ತಷ್ಟು ಹಣದುಬ್ಬರ ಏರಿಕೆಯಾದರೆ ಆರ್ಥಿಕತೆಗೆ ಹಿನ್ನಡೆಯಾಗಿ ಜಿಡಿಪಿ ಕುಸಿಯುವ ಅಪಾಯವೂ ಇದೆ. ಈ ಹಿನ್ನೆಲೆಯಲ್ಲಿ ಬಡ್ಡಿದರ ಏರಿಕೆ ಮಾಡಲು ನಿರ್ಧರಿಸಲಾಗಿದೆ.
ಬಡ್ಡಿದರ ಏರಿಕೆಯ ಪಥದಲ್ಲಿ ಆರ್ಬಿಐನ ಮೊದಲ ಹೆಜ್ಜೆ ಇದಾಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಬಡ್ಡಿದರ ಏರಿಕೆಯಾಗಲಿದೆ. ಬಡ್ಡಿದರ ಏರಿಕೆಯಾದಷ್ಟೂ ಗ್ರಾಹಕರು ಸಾಲಗಳ ಮೇಲೆ ಪಾವತಿಸಬೇಕಾದ ಬಡ್ಡಿ ಪ್ರಮಾಣ ಹಿಗ್ಗಲಿದೆ. ಇದು ಸಾಲಿಗರಿಗೆ ಹೊರೆಯಾಗಲಿದೆ.
ಬಡ್ಡಿದರ ಏರಿದಂತೆ ಠೇವಣಿಗಳ ಮೇಲಿನ ಬಡ್ಡಿದರವೂ ಏರುವುದರಿಂದ ಬಡ್ಡಿಯಲ್ಲೇ ಬದುಕು ಸಾಗಿಸುತ್ತಿರುವ ನಿವೃತ್ತರಿಗೆ ಹೆಚ್ಚಿನ ಬಡ್ಡಿ ಬರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಫ್ಯಾಶನ್ ಕ್ಷೇತ್ರದಲ್ಲಿ ಲೈಂಗಿಕ ದೌರ್ಜನ್ಯ ಕಾಮನ್ : ಕಂಗನಾ