ಉತ್ತರ ಪ್ರದೇಶ: 2022 ರಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ರಿಷಭ್ ಪಂತ್ ರಸ್ತೆ ಅಪಘಾತಕ್ಕೀಡಾದಾಗ ಅವರ ಜೀವ ಉಳಿಸಿದ್ದ ರಜತ್ ಕುಮಾರ್ ಎಂಬ ವ್ಯಕ್ತಿ ಈಗ ಪ್ರೇಯಸಿಯೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದು, ಘಟನೆಯಲ್ಲಿ ಪ್ರೇಯಸಿ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.
ಫೆಬ್ರವರಿ 9 ರಂದು ಘಟನೆ ನಡೆದಿದ್ದು ಈಗ ಬೆಳಕಿಗೆ ಬಂದಿದೆ. ರಿಷಭ್ ಪಂತ್ 2022 ರಲ್ಲಿ ಕಾರಿನಲ್ಲಿ ತೆರಳುವಾಗ ಡಿವೈಡರ್ ಗೆ ಢಿಕ್ಕಿ ಹೊಡೆದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಗ ಅವರನ್ನು ರಕ್ಷಿಸಿ ದೇಶದ ಗಮನ ಸೆಳೆದಿದ್ದ ರಜತ್ ಕುಮಾರ್.
ವಿಪರ್ಯಾಸವೆಂದರೆ 25 ವರ್ಷದ ರಜತ್ ಈಗ ತನ್ನ ಜೀವವನ್ನೇ ಕಳೆದುಕೊಳ್ಳಲು ಯತ್ನಿಸಿದ್ದಾನೆ. ಪ್ರೇಯಸಿ ಜೊತೆಗೆ ವಿಷ ಸೇವನೆ ಮಾಡಿದ್ದು ಘಟನೆಯಲ್ಲಿ ಪ್ರೇಯಸಿ ಸಾವನ್ನಪ್ಪಿದ್ದಾಳೆ. ಆದರೆ ರಜತ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಗಂಭೀರ ಸ್ಥಿತಿಯಲ್ಲಿದ್ದಾನೆ ಎಂದು ತಿಳಿದುಬಂದಿದೆ.
ಪ್ರೇಮಿಗಳಿಗೆ ಮದುವೆಯಾಗಲು ಮನೆಯವರಿಂದ ವಿರೋಧವಿತ್ತು. ಇಬ್ಬರೂ ಅನ್ಯ ಜಾತಿಯವರಾದ್ದರಿಂದ ಮನೆಯವರು ಮದುವೆಗೆ ಒಪ್ಪಿರಲಿಲಲ್ಲ. ಇದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಪೈಕಿ ಪ್ರೇಯಸಿ ಸಾವನ್ನಪ್ಪಿದ್ದಾಳೆ. ನನ್ನ ಮಗಳನ್ನು ರಜತ್ ಅಪಹರಿಸಿ ಕರೆತಂದು ವಿಷ ಪ್ರಾಷನ ಮಾಡಿಸಿದ್ದಾನೆ ಎಂದು ಯುವತಿಯ ತಾಯಿ ಆರೋಪಿಸಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.