ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಏರ್ ಶೋನಿಂದಾಗಿ ಈ ಕೆಲವು ರಸ್ತೆಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು ಮನೆಯಿಂದ ಹೊರಡುವ ಮೊದಲು ಗಮನಿಸಿ.
ಬೆಂಗಳೂರು ಏರ್ ಶೋ ನಿಮಿತ್ತ ಯಲಹಂಕ ವಾಯುನೆಲೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಈ ಪ್ರದೇಶದ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಪರಿಣಾಮ ಸಾಕಷ್ಟು ಸಂಖ್ಯೆಯಲ್ಲಿ ವಾಹನಗಳು ರಸ್ತೆಯಲ್ಲಿ ನಿಂತಲ್ಲೇ ನಿಂತಿವೆ.
ವಿಶೇಷವಾಗಿ ಯಲಹಂಕವನ್ನು ಸಂಪರ್ಕಿಸುವ ರಸ್ತೆಗಳು, ಏರ್ ಪೋರ್ಟ್ ರಸ್ತೆಯಲ್ಲಿ ಸಾಕಷ್ಟು ವಾಹನಗಳು ಸಾಲುಗಟ್ಟಿ ನಿಂತಿವೆ. ಬೆಳಿಗ್ಗೆಯಿಂದಲೇ ಇಲ್ಲಿ ವಾಹನ ನಿಧಾನವಾಗಿ ಸಂಚರಿಸುತ್ತಿವೆ. ಇದರಿಂದ ನಿಗದಿತ ಸಮಯಕ್ಕೆ ತಲುಪಬೇಕಾದ ತಲುಪಲು ಸಾಧ್ಯವಾಗದೇ ಸವಾರರು ಪರದಾಡುವಂತಾಗಿದೆ.
ನಿನ್ನೆಯೂ ಇದೇ ಪರಿಸ್ಥಿತಿಯಾಗಿತ್ತು. 2-3 ಕಿ.ಮೀ ದೂರ ಕ್ರಮಿಸಲು ಬರೋಬ್ಬರಿ 30 ನಿಮಿಷಗಳು ಬೇಕಾಗಿತ್ತು. ಇಂದೂ ಅದೇ ಪರಿಸ್ಥಿತಿಯಾಗಿದೆ. ಇಂದು ಮತ್ತು ನಾಳೆ ಸಾರ್ವಜನಿಕರಿಗೂ ಏರ್ ಶೋ ವೀಕ್ಷಣೆಗೆ ಅವಕಾಶವಿದ್ದು, ಹೀಗಾಗಿ ವಾಹನ ದಟ್ಟಣೆ ಹೆಚ್ಚಾಗಿದೆ.