ನವದೆಹಲಿ: ಭಾರತೀಯ ಸೇನೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕೆ ಸುಪ್ರೀಂಕೋರ್ಟ್ ನಿನ್ನೆ ರಾಹುಲ್ ಗಾಂಧಿಯವರಿಗೆ ನೀವು ನಿಜವಾದ ಭಾರತೀಯನಾಗಿದ್ದರೆ ಇಂತಹ ಹೇಳಿಕೆ ನೀಡುತ್ತಿರಲಿಲ್ಲ ಎಂದಿತ್ತು. ಇದಕ್ಕೆ ಈಗ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಕ್ರಿಯಿಸಿದ್ದು, ನಿಜವಾದ ಭಾರತೀಯನಾ ಎಂದು ನೀವು ಹೇಳಬೇಕಾಗಿಲ್ಲ ಎಂದಿದ್ದಾರೆ.
ಭಾರತೀಯ ಸೇನೆಗೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ತಮ್ಮ ವಿರುದ್ಧ ದಾಖಲಾದ ಮಾನನಷ್ಟ ಮೊಕದ್ದಮೆ ರದ್ದುಗೊಳಿಸುವಂತೆ ಸುಪ್ರೀಂಕೋರ್ಟ್ ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ರಾಹುಲ್ ಗಾಂಧಿಗೆ ಮೇಲಿನಂತೆ ಚಾಟಿ ಬೀಸಿತ್ತು.
ಇದನ್ನು ಉಲ್ಲೇಖಿಸಿ ಬಿಜೆಪಿ ತೀವ್ರ ಟೀಕೆ ಮಾಡಿತ್ತು. ಇದರ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಕ್ರಿಯೆ ನೀಡಿದ್ದಾರೆ. ನಿಜವಾದ ಭಾರತೀಯ ಯಾರು, ಯಾರಲ್ಲ ಎನ್ನುವುದನ್ನು ನಿರ್ಧರಿಸುವುದು ನ್ಯಾಯಮೂರ್ತಿ ಅಥವಾ ನ್ಯಾಯಾಲಯದ ಕೆಲಸವಲ್ಲ. ನನ್ನ ಸಹೋದರನಿಗೆ ಸೇನೆ ಬಗ್ಗೆ ಅಪಾರ ಗೌರವವಿದೆ ಎಂದಿದ್ದಾರೆ.
ಭಾರತದ 2000 ಚದರ ಕಿ.ಮೀ.ನ್ನು ಚೀನಾ ವಶಪಡಿಸಿಕೊಂಡಿದೆ. ಆದರೂ ಸರ್ಕಾರ ಈ ಬಗ್ಗೆ ಮೌನವಹಿಸಿದೆ ಎಂಬ ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ದೂರು ದಾಖಲಾಗಿತ್ತು. ಇದರ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಯಾವ ಆಧಾರದಲ್ಲಿ ಭಾರತದ ಭೂಭಾಗ ಚೀನಾ ಕಬಳಿಕೆ ಮಾಡಿದೆ ಎನ್ನುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದೆ.