ಬೆಂಗಳೂರು: ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಆಯೋಜಿಸಲಾಗಿತ್ತು. ಆದರೆ ಅದೀಗ ದಿಡೀರ್ ರದ್ದಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ ನಾಳೆ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲು ಯೋಜನೆ ಹಾಕಿಕೊಂಡಿದ್ದರು. ಆದರೆ ಅದೀಗ ದಿಡೀರ್ ರದ್ದಾಗಿದೆ.
ಜಾರ್ಖಂಡ್ ನ ಮಾಜಿ ಸಿಎಂ ಶಿಬು ಸೊರೇನ್ ನಿಧನ ಹಿನ್ನಲೆಯಲ್ಲಿ ರಾಹುಲ್ ಸಮಾವೇಶ ದಿಡೀರ್ ರದ್ದುಗೊಳಿಸಲಾಗಿದೆ. ಈ ಬಗ್ಗೆ ಇಂದು ಡಿಸಿಎಂ ಡಿಕೆ ಶಿವಕುಮಾರ್ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಿರಿಯ ನಾಯಕರು ಶಿಬು ಸೊರೇನ್ ಅಂತಿಮ ದರ್ಶನಕ್ಕೆ ಜಾರ್ಖಂಡ್ ಗೆ ತೆರಳಲಿದ್ದಾರೆ. ಈ ಹಿನ್ನಲೆಯಲ್ಲಿ ನಾಳೆಯ ಪ್ರತಿಭಟನಾ ಸಮಾವೇಶ ರದ್ದುಗೊಳಿಸಾಗಿದೆ. ನಾವು ರಾಹುಲ್ ಬರುತ್ತಾರೆಂದು ಕಾತುರದಿಂದ ಕಾಯುತ್ತಿದ್ದೆವು. ಆದರೆ ನಾಳೆಯ ಬದಲು ಆಗಸ್ಟ್ 8 ಕ್ಕೆ ಪ್ರತಿಭಟನೆ ಮುಂದೂಡಲಾಗಿದೆ ಎಂದು ಅವರು ಹೇಳಿದ್ದಾರೆ.
ರಾಹುಲ್ ಸಮಾವೇಶಕ್ಕೆ ಬೆಂಗಳೂರಿನಲ್ಲಿ ಎಲ್ಲಾ ಸಿದ್ಧತೆಗಳೂ ನಡೆದಿದ್ದವು. ಸರ್ಕಾರ ಮೊನ್ನೆಯಿಂದಲೇ ಫ್ರೀಡಂ ಪಾರ್ಕ್ ಬಳಿ ಮೈದಾನ ಸಜ್ಜುಗೊಳಿಸಿತ್ತು. 4,500 ಪೊಲೀಸರನ್ನೂ ಭದ್ರತೆಗೆ ನಿಯೋಜಿಸಲಾಗಿತ್ತು.