ನವದೆಹಲಿ: 2019 ರಲ್ಲಿಯೇ ನಿಧನರಾಗಿದ್ದ ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ 2020 ರಲ್ಲಿ ರಾಹುಲ್ ಗಾಂಧಿಗೆ ಬೆದರಿಕೆ ಹಾಕಿದ್ರಂತೆ. ಇಂತಹದ್ದೊಂದು ಸುಳ್ಳು ಆರೋಪ ಮಾಡಿ ರಾಹುಲ್ ಗಾಂಧಿ ಮುಜುಗರಕ್ಕೀಡಾಗಿದ್ದಾರೆ.
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಈಗ ಚುನಾವಣಾ ಆಯೋಗದ ವಿರುದ್ಧವೇ ಸಿಡಿದೆದ್ದಿದ್ದಾರೆ. ಚುನಾವಣಾ ಆಯೋಗ ಕಳ್ಳಾಟವಾಡುತ್ತಿದೆ. ಮತಗಳ್ಳತನ ಮಾಡಲು ಕೇಂದ್ರದ ಜೊತೆ ಕೈ ಜೋಡಿಸಿದೆ ಎಂದು ಗಂಭೀರ ಆರೋಪವನ್ನೇ ಮಾಡಿದ್ದಾರೆ. ಇದರ ವಿರುದ್ಧ ಪ್ರತಿಭಟನೆಯನ್ನೂ ಹಮ್ಮಿಕೊಂಡಿದ್ದಾರೆ.
ಇದರ ನಡುವೆ ರಾಹುಲ್ ಎಡವಟ್ಟೊಂದನ್ನು ಮಾಡಿದ್ದಾರೆ. 2020 ರಲ್ಲಿ ಅರುಣ್ ಜೇಟ್ಲಿ ಅವರು ನನಗೆ ಕೃಷಿ ಕಾನೂನುಗಳ ಕುರಿತು ಬೆದರಿಸಲು ನೋಡಿದ್ದರು ಎಂದು ಆರೋಪಿಸಿದ್ದಾರೆ. ಆದರೆ ಅಸಲಿಗೆ ಆ ಸಮಯದಲ್ಲಿ ಅರುಣ್ ಜೇಟ್ಲಿ ಬದುಕಿಯೇ ಇರಲಿಲ್ಲ.
ಕೇಂದ್ರ ಸರ್ಕಾರವೇ ಅರುಣ್ ಜೇಟ್ಲಿಯವರನ್ನು ನನ್ನ ಬಳಿ ಕಳುಹಿಸಿ ನೀವು ಈ ರೀತಿ ಕೃಷಿ ಮಸೂದೆ ವಿರುದ್ಧ ಪ್ರತಿಭಟನೆ ಮಾಡಿದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಬೆದರಿಕೆ ಹಾಕಿಸಿತ್ತು. ಆಗ ನಾನು ನೀವು ಯಾರ ಜೊತೆಗೆ ಮಾತನಾಡುತ್ತೀರಿ ಎಂದು ನಿಮಗೆ ತಿಳಿದಿಲ್ಲ. ಕಾಂಗ್ರೆಸ್ ನವರು ಈ ರೀತಿಯ ಬೆದರಿಕೆಗೆಲ್ಲಾ ಜಗ್ಗಲ್ಲ ಎಂದಿದ್ದೆ ಎಂದಿದ್ದರು.
ಆದರೆ ರಾಹುಲ್ ಹೇಳಿಕೆ ಈಗ ಅವರಿಗೇ ಮುಳುವಾಗಿದೆ. ಅಸಲಿಗೆ ಕೇಂದ್ರ ಸರ್ಕಾರ ಕೃಷಿ ಮಸೂದೆ ತಂದಿದ್ದು ಅರುಣ್ ಜೇಟ್ಲಿ ನಿಧನದ ಬಳಿಕ. ಹೀಗಾಗಿ ರಾಹುಲ್ ತಮ್ಮ ಮಾತಿನಿಂದ ತಾವೇ ಮುಜುಗರಕ್ಕೀಡಾಗುವಂತೆ ಆಗಿದೆ.
ರಾಹುಲ್ ಮಾತಿಗೆ ಅರುಣ್ ಜೇಟ್ಲಿ ಪುತ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕರೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಸುಳ್ಳು ಹೇಳಿಕೆ ನೀಡಿದ್ದಕ್ಕಾಗಿ ರಾಹುಲ್ ದೇಶದ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿವೆ.