ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ವೇಳೆ ಮತಗಳ್ಳತನವಾಗಿದೆ ಎಂಬ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ಆರೋಪ ಸಂಬಂಧ ಭಾರತೀಯ ಜನತಾ ಪಕ್ಷವು ಆಗಸ್ಟ್ 5 ರಂದು ವಿಧಾನಸೌಧದ ಬಳಿಯ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಬಿಜೆಪಿ ರಾಜ್ಯ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆಯ ನಂತರ ಬಿಜೆಪಿ ನಾಯಕರು ರಾಜ್ಯಪಾಲರನ್ನು ಭೇಟಿಯಾಗಿ ಔಪಚಾರಿಕ ಮನವಿ ಸಲ್ಲಿಸಲಿದ್ದಾರೆ ಎಂದು ವಿಜಯೇಂದ್ರ ತಿಳಿಸಿದರು.
ರಾಹುಲ್ ಗಾಂಧಿ ಅವರು ಆಗಸ್ಟ್ 5 ರಂದು ಬೆಂಗಳೂರಿಗೆ ಭೇಟಿ ನೀಡಿದಾಗ ರಾಜಕೀಯ "ನಾಟಕ" ಎಸಗಲು ಯೋಜಿಸಿದ್ದಾರೆ ಎಂದು ಅವರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸಂಸದರು, ಶಾಸಕರು, ಎಂಎಲ್‌ಸಿಗಳು, ಮಾಜಿ ಸಂಸದರು ಮತ್ತು ಶಾಸಕರು ಮತ್ತು ಬಿಜೆಪಿಯ ಮಾಜಿ ಎಂಎಲ್‌ಸಿಗಳು ಭಾಗವಹಿಸಲಿದ್ದಾರೆ ಎಂದು ವಿಜಯೇಂದ್ರ ಹೇಳಿದರು.
ಮತಗಳ್ಳತನ ಆರೋಪ ಸಂಬಂಧ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಕರ್ನಾಟಕದ ಜನತೆಯ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದರು.
ಇತ್ತೀಚಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ವಿವಿಧ ರಾಜ್ಯಗಳಲ್ಲಿ ವ್ಯಾಪಕ ಚುನಾವಣಾ ವಂಚನೆಯಾಗಿದೆ ಎಂದು ಆರೋಪಿಸಿ ರಾಜ್ಯದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಇದಕ್ಕೆ ಪ್ರತೀತಂತ್ರ ಹೆಣೆಯಲು ಬಿಜೆಪಿ ಕೂಡಾ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.