ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆವೃತ್ತಿಯಿಂದ ಸಾರಿಗೆ ಇಲಾಖೆ ನೌಕರರು ಇದೇ 5ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದಾರೆ. ಈ ಮಧ್ಯೆ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದ್ದು, ನೌಕರರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಇದೇ ಸೋಮವಾರದಿಂದಲೇ ಅನ್ವಯವಾಗುವಂತೆ ಅನಿರ್ದಿಷ್ಟಾವಧಿವರೆಗೆ ಸಾರಿಗೆ ನೌಕರರ ರಜೆಯನ್ನ ರದ್ದುಗೊಳಿಸಿ ಸಾರಿಗೆ ಇಲಾಖೆ ಸುತ್ತೋಲೆ ಹೊರಡಿಸಿದೆ. ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ, ಉಳಿಯದ ಯಾವುದೇ ರೀತಿಯ ರಜೆಗಳನ್ನು ಮಂಜೂರು ಮಾಡದಂತೆ ಆಯಾ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದೆ,
ನೌಕರರಿಗೆ ಅಗತ್ಯಬಿದ್ದರೆ ವಾರದ ರಜೆ ಕೂಡ ರದ್ದು ಮಾಡಲು ಅಧಿಕಾರಿಗಳಿಗೆ ಸೂಚಿಸಿದೆ. ಜೊತೆಗೆ ಇಂದಿನಿಂದಲೇ ಜಾರಿಗೆ ಬರುವಂತೆ ಮುಷ್ಕರದ ಅವಧಿಯಲ್ಲಿ ಕೆಲಸಕ್ಕೆ ಗೈರಾಗುವ ನೌಕರರ ವೇತನವನ್ನೂ ಕಡಿತಗೊಳಿಸುವುದಾಗಿ ಸುತ್ತೋಲೆಯಲ್ಲಿ ಉಲ್ಲೇಖಿಸಿದೆ.
ಇದೇ 4ರಿಂದ ಮುಷ್ಕರದ ದಿನಗಳಂದು ಕರ್ತವ್ಯಕ್ಕೆ ಗೈರುಹಾಜರಾಗುವ ನೌಕರರ ಪಟ್ಟಿಯಲ್ಲಿ ದಿನವಹಿ/ ಘಟಕವಾರು/ ವರ್ಗಾವಾರು ಸಿದ್ಧಪಡಿಸಿ, ಕೆಲಸ ಮಾಡದಿದ್ದ ದಿನಗಳ ವೇತನ ಕಡಿತಗೊಳಿಸುವುದು. ಅಲ್ಲದೇ, ವಿಶೇಷ ಸೂಚನೆಯಡಿ ನೀಡಿರುವ ನಿರ್ದೇಶನದನ್ವಯ ಕರ್ತವ್ಯಕ್ಕೆ ಗೈರುಹಾಜರಾದ ನೌಕರರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ನಾಲ್ಕು ನಿಗಮಗಳಿಗೆ ಸಾರಿಗೆ ಇಲಾಖೆ ಸೂಚನೆ ನೀಡಿದೆ.