ಅಯೋಧ್ಯೆ: ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಆರಂಭವಾಗಿದ್ದು, ಪ್ರಧಾನಿ ಮೋದಿ ಪವಿತ್ರ ವಸ್ತ್ರ, ಆಭರಣಗಳನ್ನು ಹೊತ್ತು ತಂದಿದ್ದಾರೆ.
ಮಂದಿರದ ಆವರಣದಿಂದ ಮೋದಿ ಪವಿತ್ರ ವಸ್ತ್ರವನ್ನು ಹಿಡಿದು ಮಂದಿರ ಪ್ರವೇಶಿಸುವಾಗ ಶಂಖನಾದ ಮಾಡಲಾಯಿತು. ಪವಿತ್ರ ವಸ್ತ್ರದೊಂದಿಗೆ ಪ್ರಧಾನಿ ಮಂದಿರದ ಗರ್ಭಗುಡಿ ಪ್ರವೇಶಿಸಿದರು.
ಇದೀಗ ರಾಮಮಂದಿರದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತಿದ್ದು, ಪ್ರಧಾನಿ ಮೋದಿ ಧಾರ್ಮಿಕ ಕ್ರಿಯೆಗಳನ್ನು ನೆರವೇರಿಸುತ್ತಿದ್ದಾರೆ. ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನೆರವೇರಲಿದೆ. 12.29 ರಿಂದ 12.30 ರೊಳಗಿನ ಅಭಿಜಿನ್ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠೆ ನಡೆಯಲಿದೆ.
ಸುನಿಲ್ ಶಾಸ್ತ್ರೀಜಿ ಪ್ರಧಾನಿ ಮೋದಿಯವರಿಗೆ ಪ್ರಾಣ ಪ್ರತಿಷ್ಠೆಯ ಕಾರ್ಯಗಳನ್ನು ಮಾಡಿಸುತ್ತಿದ್ದಾರೆ. ಬಾಲರಾಮನ ವಿಗ್ರಹದ ಮುಂದೆ ಕುಳಿತು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಮೋದಿ ಜೊತೆಗೆ ಆರ್ ಎಸ್ಎಸ್ ಸಂಚಾಲಕ ಮೋಹನ್ ಭಾಗವತ್ ಕೂಡಾ ಉಪಸ್ಥಿತರಿದ್ದಾರೆ.