ಪೆಹಲ್ಗಾಮ್: ಉಗ್ರ ದಾಳಿಯಲ್ಲಿ 26 ಜನ ಸಾವನ್ನಪ್ಪಿರುವುದು ಖಚಿತವಾಗಿದ್ದರೆ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ ಕನ್ನಡಿಗರೊಬ್ಬರು ಉಗ್ರರ ದಾಳಿಯಿಂದ ನಮ್ಮನ್ನು ಕಾಪಾಡಿದ್ದು ಒಂದು ಐಸ್ ಕ್ರೀಂ ಎಂದಿದ್ದಾರೆ.
ಬೆಂಗಳೂರಿನ ನ್ಯೂ ತಿಪ್ಪಸಂದ್ರದ ಸುಮನಾ ಭಟ್ ಕೂಡಾ ತಾವು ಕೆಲಸ ಮಾಡುತ್ತಿದ್ದ ಟೈಮೆಕ್ಸ್ ಸಂಸ್ಥೆಯ 17 ಮಂದಿ ಉದ್ಯೋಗಿಗಳೊಂದಿಗೆ ಕಾಶ್ಮೀರ ಪ್ರವಾಸ ಮಾಡಿದ್ದರು. ಇನ್ನೇನು ಅವರು ಪೆಹಲ್ಗಾಮ್ ಗೆ ತಲುಪಬೇಕಿತ್ತು.
ಆದರೆ ಅವರನ್ನು ಐಸ್ ಕ್ರೀಂ ತಿನ್ನುವ ಬಯಕೆ ಕಾಪಾಡಿತ್ತು. ಗೈಡ್ ಗಳು ಪೆಹಲ್ಗಾಮ್ ಬಗ್ಗೆ ಹೇಳಿದ್ದರಿಂದ ಕುದುರೆ ಮೇಲೆ ಹೊರಟಿದ್ದೆವು. ಆದರೆ ಮಧ್ಯೆ ನಮಗೆ ಐಸ್ ಕ್ರೀಂ ತಿನ್ನುವ ಬಯಕೆಯಾಯಿತು. ಹೀಗಾಗಿ ಐಸ್ ಕ್ರೀಂ ತಿನ್ನುತ್ತಾ ಹಿಂದೆ ಉಳಿದೆವು. ಉಳಿದ ಪ್ರವಾಸಿಗರು ಮುಂದೆ ಹೋಗಿದ್ದರು.
ಐಸ್ ಕ್ರೀಂ ತಿನ್ನುವ ದೆಸೆಯಿಂದ ಹಿಂದೆ ಉಳಿದಿದ್ದರಿಂದ ನಮ್ಮ ಜೀವ ಉಳಿಯಿತು ಎಂದು ಸುಮನಾ ಭಟ್ ಹೇಳಿದ್ದಾರೆ. ಪೆಹಲ್ಗಾಮ್ ಗೆ ತಲುಪಲು 3 ಕಿ.ಮೀ. ಇರುವಾಗ ನಮ್ಮನ್ನು ವಾಪಸ್ ಹೋಗಲು ಹೇಳಿದರು. ಅಂತೆಯೇ ನಾವು 3 ಕಿ.ಮೀ. ನಡೆದು ನಮ್ಮ ಹೋಟೆಲ್ ಗೆ ಬಂದು ಮಿಲಿಟರಿ ವಾಹನದಲ್ಲಿ ಜಮ್ಮುವಿಗೆ ವಾಪಸ್ ಆದೆವು ಎಂದು ಸುಮನಾ ಹೇಳಿದ್ದಾರೆ.