ನವದೆಹಲಿ: ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಅಲ್ಪ ಸಂಖ್ಯಾತ ಹಿಂದೂಗಳ ಮೇಲಾಗುತ್ತಿರುವ ಹಿಂಸಾಚಾರ ಖಂಡಿಸಿ ಇಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ನೇತೃತ್ವದಲ್ಲಿ ವಿಪಕ್ಷ ಸಂಸದರು ಸಂಸತ್ ಭವನದ ಮುಂಭಾಗ ಪ್ರತಿಭಟನೆ ನಡೆಸಿದರು.
ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಅಧಿಕಾರ ಕಳೆದುಕೊಂಡ ಬಳಿಕ ಹಿಂದೂಗಳ ಸ್ಥಿತಿ ಶೋಚನೀಯವಾಗಿದೆ. ಸಿಕ್ಕ ಸಿಕ್ಕಲ್ಲಿ ಹಿಂದೂಗಳ ಮೇಲೆ ದಾಳಿಯಾಗುತ್ತಿದೆ. ಕೆಲವೆಡೆ ಹಿಂದೂ ದೇವಾಲಯಗಳನ್ನೂ ಧ್ವಂಸ ಮಾಡುವ ಕೆಲಸ ಮಾಡಲಾಗುತ್ತಿದೆ. ಆದರೆ ಹಿಂದೂಗಳು ಎಷ್ಟೇ ಮನವಿ ಮಾಡಿಕೊಂಡರೂ ಈ ಬಗ್ಗೆ ಸರ್ಕಾರ ಕಿಂಚಿತ್ತೂ ಗಮನಹರಿಸುತ್ತಿಲ್ಲ.
ಇತ್ತೀಚೆಗೆ ಇಸ್ಕಾನ್ ಸಂಸ್ಥೆಯ ಮುಖ್ಯಸ್ಥರನ್ನೂ ಬಂಧಿಸಲಾಗಿತ್ತು. ಅವರ ಪರ ವಕೀಲರಾಗಿ ಕೋರ್ಟ್ ಗೆ ಹೋಗಬೇಕಾಗಿದ್ದ ವಕೀಲರನ್ನು ಕೊಲೆ ಮಾಡಲಾಗಿತ್ತು. ಒಟ್ಟಿನಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳು ಭಯದಲ್ಲೇ ಬದುಕುವ ವಾತಾವವಣವಿದೆ. ಈ ಬಗ್ಗೆ ನಿನ್ನೆಯಷ್ಟೇ ಸಂಸತ್ ನಲ್ಲಿ ಪ್ರಿಯಾಂಕ ವಾದ್ರಾ ಪ್ರಸ್ತಾಪಿಸಿದ್ದರು.
ಕೇಂದ್ರ ಸರ್ಕಾರ ಬಾಂಗ್ಲಾದೇಶದಲ್ಲಿನ ಹಿಂದೂಗಳ ಬಗ್ಗೆ ಧ್ವನಿಯೆತ್ತಬೇಕು ಎಂದಿದ್ದರು. ಇಂದು ವಿಪಕ್ಷ ಸಂಸದರೊಂದಿಗೆ ಭಿತ್ತಿಪತ್ರ ಹಿಡಿದು ಸಂಸತ್ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಬಾಂಗ್ಲಾದೇಶದಲ್ಲಿನ ಹಿಂದೂಗಳ ನೆರವಿಗೆ ನಿಲ್ಲುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.