ನವದೆಹಲಿ: ಲೋಕಸಭೆಯಲ್ಲಿ ಇಂದು ರಾಹುಲ್ ಗಾಂಧಿ ಭಾಷಣದ ವೇಳೆ ತಪಸ್ಸು ಎಂದರೇನು ಎಂದು ಮಾಡಿದ ಭಾಷಣವನ್ನು ಕೇಳಿ ಆಡಳಿತ ಪಕ್ಷದ ಸದಸ್ಯರು ಜೋರಾಗಿ ನಕ್ಕ ಘಟನೆ ನಡೆದಿದೆ.
ಲೋಕಸಭೆ ಕಲಾಪದಲ್ಲಿ ಇಂದು ರಾಹುಲ್ ಗಾಂಧಿ ತಮ್ಮ ಸರದಿ ಬಂದಾಗ ಸುದೀರ್ಘವಾಗಿ ಮಾತನಾಡಿದ್ದಾರೆ. ಸಂವಿಧಾನ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಸಂವಿಧಾನದ ಮಹತ್ವದ ಬಗ್ಗೆ ಸುದೀರ್ಘ ಮಾತನಾಡಿದ್ದಾರೆ. ನಡುವೆ ತಪಸ್ಸು ಎಂದರೇನು ಎಂದು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನ ಕೊಟ್ಟಿದ್ದಾರೆ.
ಧನುಷ್ ನಲ್ಲಿ ತಪಸ್ಸಿದೆ. ಮನ್ ರೇಗದ ಕೆಲಸ ಮಾಡುವುದರಲ್ಲಿ ತಪಸ್ಸಿದೆ. ನಿಮಗೆ ಇದು ಅರ್ಥವಾಗಲ್ಲ. ತಪಸ್ಸು ಎಂದರೆ ಏನು ಗೊತ್ತಾ, ಶರೀರದಲ್ಲಿ ಶಾಖ ಉತ್ಪನ್ನ ಮಾಡುವುದಾಗಿದೆ ಎಂದು ರಾಹುಲ್ ಗಾಂಧಿ ಹೇಳುತ್ತಿದ್ದಂತೆ ಆಡಳಿತ ಪಕ್ಷದ ಸಂಸದರು ಬಿದ್ದು ಬಿದ್ದು ನಕ್ಕರು.
ಇನ್ನೊಮ್ಮೆ ದ್ರೋಣಾಚಾರ್ಯರು ಏಕಲವ್ಯನ ಹೆಬ್ಬೆರಳು ಕತ್ತರಿಸಿದರು ಎಂದು ಎಡವಟ್ಟು ಮಾಡಿದರು. ಆಗ ದ್ರೋಣಾಚಾರ್ಯರು ಏಕಲವ್ಯನ ಬೆರಳು ಕತ್ತಿರಸಲಿಲ್ಲ ಎಂದು ಆಡಳಿತ ಪಕ್ಷದ ಸಂಸದರು ತಿದ್ದಿದರು. ಆಗ ಸರಿಪಡಿಸಿಕೊಂಡ ರಾಹುಲ್ ಗಾಂಧಿ ದ್ರೋಣಾಚಾರ್ಯರು ಏಕಲವ್ಯನ ಬೆರಳು ಕತ್ತರಿಸುವಂತೆ ಮಾಡಿದ್ದಕ್ಕೆ ಎಂದು ತಿದ್ದಿಕೊಂಡರು. ದ್ರೋಣಾಚಾರ್ಯರು ಮಾಡಿದಂತೆ ಕೇಂದ್ರ ಸರ್ಕಾರವೂ ಅದಾನಿಯಂತಹ ಉದ್ಯಮಿಗಳಿಗೆ ನೆರವು ನೀಡುತ್ತದೆ, ಸಣ್ಣ ಉದ್ದಿಮೆದಾರರ ಬೆರಳು ಕತ್ತರಿಸುತ್ತದೆ ಎಂದು ಹೋಲಿಕೆ ಮಾಡಿ ವಾಗ್ದಾಳಿ ನಡೆಸಿದರು.