ನವದೆಹಲಿ: ಲೋಕಸಭೆ ಸಂಸದೆಯಾಗಿ ಮೊದಲ ಬಾರಿಗೆ ಸಂಸತ್ತಿನಲ್ಲಿ ಭಾಷಣ ಮಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಮೊದಲ ಭಾಷಣದಲ್ಲೇ ಮೋದಿ ಸರ್ಕಾರಕ್ಕೆ ಚುಚ್ಚಿದ್ದಾರೆ.
ಇತ್ತೀಚೆಗೆ ವಯನಾಡಿನಲ್ಲಿ ನಡೆದ ಲೋಕಸಭೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಪ್ರಿಯಾಂಕ ವಾದ್ರಾ ಇಂದು ಮೊದಲ ಬಾರಿಗೆ ಸಂಸತ್ತಿನಲ್ಲಿ ಮಾತನಾಡಿದ್ದಾರೆ. ಇಂದು ಅವರಿಗೆ ಮೊದಲ ಬಾರಿಗೆ ಮಾತನಾಡುವ ಅವಕಾಶ ಸಿಕ್ಕಾಗ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಸಂವಿಧಾನ ಎನ್ನುವುದು ಜನರ ರಕ್ಷಣೆಗಾಗಿ ಇದೆ. ಇದು ಜನರ ಏಕತೆ, ಸುರಕ್ಷತೆ ಮತ್ತು ಮುಕ್ತವಾಗಿ ಮಾತನಾಡುವ ಹಕ್ಕು ನೀಡುವ ಕವಚವಾಗಿದೆ. ಆದರೆ ಕಳೆದ 10 ವರ್ಷಗಳಿಂದ ಆಡಳಿತ ಸರ್ಕಾರದ ಸಹೋದ್ಯೋಗಿಗಳು ಈ ಕವಚವನ್ನು ಮುರಿಯಲು ಯತ್ನಿಸಿದರು ಎಂದು ಪ್ರಿಯಾಂಕ ಆರೋಪಿಸಿದ್ದಾರೆ.
ಖಾಸಗೀಕರಣದ ಮೂಲಕ ಸರ್ಕಾರ ಮೀಸಲಾತಿಯನ್ನು ದುರ್ಬಲ ಮಾಡಲು ಯತ್ನಿಸುತ್ತಿದೆ. ಕೇಂದ್ರ ಸರ್ಕಾರ ಉದ್ಯಮಿಗಳನ್ನು ರಕ್ಷಿಸುವುದಕ್ಕೆ ಪ್ರಾಮುಖ್ಯತೆ ನೀಡುತ್ತಿದೆ. ದೇಶದಲ್ಲಿ ವಿಮಾನ ನಿಲ್ದಾಣಗಳು, ಭೂಮಿ, ಸಂಪತ್ತು ಎಲ್ಲವೂ ಖಾಸಗೀಕರಣಗೊಳ್ಳುತ್ತಿದೆ. ಇದು ಅಪಾಯಕಾರಿ ಎಂದು ಪ್ರಿಯಾಂಕ ಮೊದಲ ಭಾಷಣದಲ್ಲೇ ವಾಗ್ದಾಳಿ ನಡೆಸಿದ್ದಾರೆ.