ವಿವಾಹಿತ ಮಗ ಮತ್ತು ವಿವಾಹಿತ ಮಗಳ ನಡುವೆ ಯಾವುದೇ ತಾರತಮ್ಯ ತೋರಲು ಸಾಧ್ಯವಿಲ್ಲ. ವೈವಾಹಿಕ ಸ್ಥಿತಿಯ ಆಧಾರದ ಮೇಲೆ ಮಗ ಮತ್ತು ಮಗಳ ನಡುವೆ ತಾರತಮ್ಯ ಮಾಡುವುದು ನಿರಂಕುಶತೆಯ ಪ್ರತೀಕ ಮತ್ತು ಸಮಾನತೆಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಮೂರ್ತಿ ಕಳೆದ ವಾರ ನೀಡಿದ ಮಹತ್ವಪೂರ್ಣ ಪ್ರಕರಣವೊಂದರ ತೀರ್ಪಿನ ಸಂದರ್ಭದಲ್ಲಿ ಹೇಳಿದ್ದಾರೆ.
ಸೇವೆಯಲ್ಲಿದ್ದಾಗಲೇ ಮರಣ ಹೊಂದಿದ ಸರ್ಕಾರಿ ಉದ್ಯೋಗಿಯ ವಿವಾಹಿತ ಮಗ ತಂದೆಯ ಕೆಲಸವನ್ನು ಪಡೆಯಲು ಅರ್ಹನಾಗಿರುತ್ತಾರೆ. ಆದರೆ ಮೃತನ ವಿವಾಹಿತ ಮಗಳಿಗೆ ಅನುಕಂಪದ ಆಧಾರದ ಅಡಿಯಲ್ಲಿ ನೇಮಕ ಮಾಡಿಕೊಳ್ಳಲಾಗುವುದಿಲ್ಲ ಎಂಬ ಸರಕಾರದ ನಿಯಮಕ್ಕೆ ಮದ್ರಾಸ್ ಹೈಕೋರ್ಟ್ ಆಶ್ಚರ್ಯವನ್ನು ವ್ಯಕ್ತ ಪಡಿಸಿದೆ.
ಈ ಪ್ರಕರಣ ರೇಣುಕಾ ಎಂಬುವವರಿಗೆ ಸಂಬಂಧಿಸಿದೆ. ಪಶುಸಂಗೋಪನೆ ಇಲಾಖೆಯಲ್ಲಿ ಕಚೇರಿ ಸಹಾಯಕನಾಗಿ ಸೇವೆ ಸಲ್ಲಿಸುತ್ತಿದ್ದ ಆಕೆಯ ತಂದೆ ಸೇವೆಯಲ್ಲಿದ್ದಾಗಲೇ ತೀರಿಕೊಂಡಿದ್ದರು. ತನ್ನ ಪತ್ನಿ ಮತ್ತು ಮೂವರು ಮದುವೆಯಾದ ಹೆಣ್ಣುಮಕ್ಕಳು ಮತ್ತು ಅವಿವಾಹಿತ ಮಗಳೊಬ್ಬರನ್ನವರು ಅಗಲಿದ್ದರು.
ಎಲ್ಲ ಮಕ್ಕಳಲ್ಲಿ ಹಿರಿಯವಳಾಗಿದ್ದ ರೇಣುಕಾ ಗಂಡನಿಂದ ಪರಿತ್ಯಜಿಸಲ್ಪಟ್ಟಿದ್ದರು ಮತ್ತು ತಂದೆಯ ಸಾವಿನ ಸಮಯದಲ್ಲಿ ತವರಿನಲ್ಲಿದ್ದರು. ಅನುಕಂಪದ ಆಧಾರದ ಮೇಲೆ ತನ್ನ ತಂದೆಯ ಕೆಲಸ ತನಗೆ ಕೊಡಬೇಕೆಂದು ಆಕೆ ಸಂಬಂಧಿಸಿದ ಇಲಾಖೆಗೆ ಮನವಿ ಸಲ್ಲಿಸಿದ್ದಳು. ಆದರೆ ಆಕೆಗಾಗಲೇ ಮದುವೆಯಾಗಿದ್ದರಿಂದ ಸರಕಾರ ಆಕೆಗೆ ತಂದೆಯಿಂದ ತೆರವಾಗಿದ್ದ ಕೆಲಸವನ್ನು ನೀಡಲು ನಿರಾಕರಿಸಿತ್ತು. ಸರಕಾರದ ಈ ಕ್ರಮವನ್ನು ಪ್ರಶ್ನಿಸಿ ಆಕೆ ಕೋರ್ಟ್ ಮೆಟ್ಟಿಲೇರಿದ್ದರು.