ನವದೆಹಲಿ: ಸಂಸತ್ತಿನ ಹೊರಗೆ ಇಂದು ಕಾಂಗ್ರೆಸ್ ಮತ್ತು ಬಿಜೆಪಿ ಸಂಸದರ ನೂಕಾಟ, ತಳ್ಳಾಟ ಭಾರೀ ಚರ್ಚೆಗೆ ಕಾರಣವಾಗಿದೆ. ತಳ್ಳಾಟದಲ್ಲಿ ಕೆಳಕ್ಕೆ ಬಿದ್ದ ಬಿಜೆಪಿ ಸಂಸದ ಪ್ರತಾಪ್ ನನ್ನನ್ನು ರಾಹುಲ್ ಗಾಂಧಿ ತಳ್ಳಿದರು ಎಂದು ಆರೋಪಿಸಿದರೆ, ಇತ್ತ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ಸಂಸದರು ತಳ್ಳಿದ್ದರಿಂದ ನನ್ನ ಮೊಣಕಾಲಿಗೆ ಗಾಯವಾಗಿದೆ ಎಂದಿದ್ದಾರೆ.
ಸಂಸತ್ತಿನ ಪ್ರತಿಭಟನೆಗಳು ಇದುವರೆಗೆ ಬಾಯಿ ಮಾತಿನಲ್ಲೇ ನಡೆಯುತ್ತಿತ್ತು. ಆದರೆ ಈ ಬಾರಿ ಇದು ತಳ್ಳಾಟ-ನೂಕಾಟದ ಮಟ್ಟ ತಲುಪಿದೆ. ಓರ್ವ ಸಂಸದ ತನ್ನ ಮೇಲೆ ಬಿದ್ದಿದ್ದರಿಂದ ಪ್ರತಾಪ್ ಬಿದ್ದು ಹಣೆಗೆ ಗಾಯ ಮಾಡಿಕೊಂಡಿದ್ದಾರೆ. ರಾಹುಲ್ ಗಾಂಧಿ ಓರ್ವ ಸಂಸದನನ್ನು ನನ್ನ ಮೇಲೆ ತಳ್ಳಿದ್ದರಿಂದಲೇ ನಾನು ಬಿದ್ದಿದ್ದು ಎಂದು ಪ್ರತಾಪ್ ಬಳಿಕ ಹೇಳಿಕೆ ನೀಡಿದ್ದಾರೆ.
ಇತ್ತ ರಾಜ್ಯಸಭೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡಾ ನನಗೂ ತಳ್ಳಾಟದಲ್ಲಿ ಮೊಣಕಾಲಿಗೆ ಗಾಯವಾಗಿದೆ. ಬಿಜೆಪಿ ಸಂಸದರು ನನ್ನನ್ನು ತಳ್ಳಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ. ಮಕರ ದ್ವಾರದ ಬಳಿ ಬಿಜೆಪಿ ಸಂಸದರು ನನ್ನನ್ನು ತಳ್ಳಿದ್ದಾರೆ. ಈ ವೇಳೆ ಸಮತೋಲನ ತಪ್ಪಿ ನಾನು ಬಿದ್ದಿದ್ದೆ. ಇದರಿಂದ ಈಗಾಗಲೇ ಶಸ್ತ್ರಚಿಕಿತ್ಸೆಗೊಳಗಾಗಿರುವ ಮೊಣಕಾಲಿಗೆ ಗಾಯವಾಗಿದೆ ಎಂದು ಖರ್ಗೆ ಸ್ಪೀಕರ್ ಗೆ ಪತ್ರ ಬರೆದು ದೂರಿದ್ದಾರೆ.
ಅಂತೂ ಇಷ್ಟು ದಿನ ಬಾಯಿ ಮಾತಿನಲ್ಲೇ ರಣರಂಗವಾಗುತ್ತಿದ್ದ ಪಾರ್ಲಿಮೆಂಟ್ ಇಂದು ಗುದ್ದಾಟ-ತಳ್ಳಾಟದ ಮಟ್ಟಕ್ಕೆ ತಲುಪಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ.