ನವದೆಹಲಿ: ಡಾ ಬಿಆರ್ ಅಂಬೇಡ್ಕರ್ ಗೆ ಗೃಹಸಚಿವ ಅಮಿತ್ ಶಾ ಅವಮಾನ ಮಾಡಿದ್ದಾರೆಂಬ ವಿಚಾರದಲ್ಲಿ ಲೋಕಸಭೆಯಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವಿನ ಗಲಾಟೆ ತಾರಕಕ್ಕೇರಿದೆ. ಈ ನಡುವೆ ಸಂಸದ ಪ್ರತಾಪ್ ಗಾಯಗೊಂಡಿದ್ದಾರೆ.
ಇಂದು ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಜೋರಾಗಿ ತಳ್ಳಾಟ, ಗಲಾಟೆಯಾಗಿದೆ. ಈ ವೇಳೆ ಬಿಜೆಪಿ ಸಂಸದ ಪ್ರತಾಪ್ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಘಟನೆ ನಡೆದ ತಕ್ಷಣ ಅಲ್ಲಿದ್ದ ಸಂಸದರು ಅವರನ್ನು ಕುಳ್ಳಿರಿಸಿ ಉಪಚರಿಸಿದ್ದಾರೆ. ರಾಹುಲ್ ಗಾಂಧಿ ಬೇರೊಬ್ಬ ಸಂಸದರನ್ನು ಪ್ರತಾಪ್ ಮೇಲೆ ತಳ್ಳಿದಾಗ ಅವರು ಗಾಯಗೊಂಡರು ಎಂಬುದು ಬಿಜೆಪಿ ಸಂಸದರ ಆರೋಪವಾಗಿದೆ.
ವಿಶೇಷವಾಗಿ ಸಂಸತ್ತಿನಲ್ಲಿದ್ದ ಸಂಸದ, ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಪ್ರಥಮ ಚಿಕಿತ್ಸೆಗೆ ಮುಂದಾಗಿದ್ದಾರೆ. ಸಂಸದರಾಗಿದ್ದರೂ ವೈದ್ಯ ವೃತ್ತಿ ಮರೆಯದ ಮಂಜುನಾಥ್ ಗಾಯಗೊಂಡ ಸಂಸದರನ್ನು ಕುಳ್ಳಿರಿಸಿ ಹಣೆಗೆ ಬಟ್ಟೆ ಇಟ್ಟು ಪರೀಕ್ಷೆ ಮಾಡಿದ್ದಾರೆ.
ಇತರೆ ಸಂಸದರು ಡಾ ಸಿಎನ್ ಮಂಜುನಾಥ್ ಗೆ ಸಹಾಯ ಮಾಡಿದ್ದಾರೆ. ಈ ವೇಳೆ ವಿಚಾರಿಸಲು ಬಂದ ರಾಹುಲ್ ಗಾಂಧಿಗೆ ಬಿಜೆಪಿ ಸಂಸದರು ಛೀಮಾರಿ ಹಾಕಿದರು. ಆಗ ರಾಹುಲ್ ನಾನೇನೂ ಮಾಡಿಲ್ಲ ಎಂದು ಸ್ಥಳದಿಂದ ಜಾಗ ಖಾಲಿ ಮಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.