ಮಧ್ಯಪ್ರದೇಶದ ಆಸ್ಪತ್ರೆಯಲ್ಲಿ ಶುಕ್ರವಾರ ಯುವತಿಯೊಬ್ಬಳನ್ನು ಯುವಕನೊಬ್ಬ ಸಾರ್ವಜನಿಕರು ಇರುವಾಗಲೇ ಸಿನಿಮೀಯ ರೀತಿಯಲ್ಲಿ ಕತ್ತು ಸೀಳಿ ಕೊಲೆ ಮಾಡಿದ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
23 ವರ್ಷದ ಟ್ರೈನಿ ನರ್ಸ್ ನರಸಿಂಗ್‌ಪುರ ಜಿಲ್ಲೆಯ ಆಸ್ಪತ್ರೆಯಲ್ಲಿ ಕೊಲೆಯಾಗಿದ್ದಾರೆ. ಆಸ್ಪತ್ರೆಯಲ್ಲಿ ನರ್ಸ್ ಸಂಧ್ಯಾ ಚೌಧರಿ ಅವರನ್ನು ಆರೋಪಿ ಚಾಕುವಿನಲ್ಲಿ ಕತ್ತು ಸೀಳಿ ಆಕೆಯನ್ನು ಕೊಲೆ ಮಾಡಿದ್ದಾನೆ.
ಆಸ್ಪತ್ರೆಯ ಒಳಗೆ ಹತ್ತಾರು ಮಂದಿ ಸುತ್ತಮುತ್ತಾ ನಿಂತಿರುವಾಗಲೇ ಸಂಧ್ಯಾಳನ್ನು ಯುವಕ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಆದರೆ ಅಲ್ಲಿದ್ದವರು ಯಾರೊಬ್ಬರು ಆಕೆಯನ್ನು ರಕ್ಷಿಸಲು ಮುಂದಾಗಲಿಲ್ಲ.
ಸಂಧ್ಯಾ ಆಸ್ಪತ್ರೆಯಲ್ಲಿ ತರಬೇತಿ ಪಡೆಯುತ್ತಿದ್ದಾಗ ಆಕೆ ಹತ್ಯೆಯಾಗಿದ್ದಾಳೆ. ಹೆರಿಗೆ ವಾರ್ಡ್‌ನಲ್ಲಿರುವ ಸ್ನೇಹಿತನ ಅತ್ತಿಗೆಯನ್ನು ಭೇಟಿ ಮಾಡಲು ಹೋಗುವುದಾಗಿ ತನ್ನ ಮನೆಯವರಿಗೆ ಹೇಳಿದ್ದಳು. ಆದರೆ, ಜೂನ್ 27 ರಂದು ಮಧ್ಯಾಹ್ನದಿಂದ ಆಸ್ಪತ್ರೆಯಲ್ಲಿ ಸುತ್ತಾಡುತ್ತಿದ್ದ ಆಕೆಯ ಗೆಳೆಯ, ಆಕೆಯ ಹೊರಗಿನ ಕೊಠಡಿ ಸಂಖ್ಯೆ 22 ಕ್ಕೆ ಮುಖಾಮುಖಿಯಾಗಿದ್ದಾನೆ.
ಸ್ವಲ್ಪ ಸಮಯದ ನಂತರ, ಅಭಿಷೇಕ್ ಇದ್ದಕ್ಕಿದ್ದಂತೆ ಚಾಕುವನ್ನು ಹೊರತೆಗೆದು ಅವಳ ಕತ್ತು ಸೀಳಿದನು. ಸುಮಾರು 10 ನಿಮಿಷಗಳ ಕಾಲ ಇಡೀ ಕೃತ್ಯ ನಡೆದಿದ್ದು, ಭಾರೀ ರಕ್ತಸ್ರಾವದಿಂದ ಸಂಧ್ಯಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಭಿಷೇಕ್ ಸಂಧ್ಯಾಳನ್ನು ಕಪಾಳಮೋಕ್ಷ ಮಾಡುವುದು, ನೆಲಕ್ಕೆ ಎಸೆದು, ಎದೆಯ ಮೇಲೆ ಕೂರಿಸಿಕೊಂಡು ಆಕೆಯ ಕತ್ತು ಸೀಳುವುದು ದೃಶ್ಯಗಳಲ್ಲಿ ಕಂಡುಬಂದಿದೆ.