ಮುಂಬೈ: ನಾವು ಏನೋ ಬೇಜಾರು ಎಂದರೆ ಒಂದೋ ಎರಡೋ ದಿನ ಮನೆಯೊಳಗೇ ಕಾಲ ಕಳೆಯಬಹುದು. ಆದರೆ ಈ ವ್ಯಕ್ತಿ ಮೂರು ವರ್ಷಗಳಿಂದ ತನ್ನ ಫ್ಲ್ಯಾಟ್ ಒಳಗೆ ಲಾಕ್ ಮಾಅಡಿಕೊಂಡು ಕೂತಿದ್ದ! ಮುಂಬೈನಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಸಾಮಾಜಿಕ ಕಾರ್ಯಕರ್ತರು ಈತನನ್ನು ರಕ್ಷಿಸಿದ್ದಾರೆ.
55 ವರ್ಷದ ಅನೂಪ್ ಕುಮಾರ್ ನಾಯರ್ ಎಂಬಾತ ಈ ರೀತಿ ತನ್ನನ್ನು ತಾನು ಮೂರು ವರ್ಷ ಮನೆಯೊಳಗೆ ಲಾಕ್ ಮಾಡಿಕೊಂಡಿದ್ದ. ಮೂರು ವರ್ಷದ ಹಿಂದೆ ತನ್ನ ತಂದೆ-ತಾಯಿಯನ್ನು ಈತ ಬೆನ್ನು ಬೆನ್ನಿಗೇ ಕಳೆದುಕೊಂಡಿದ್ದನಂತೆ. ಇದಾದ ಬಳಿಕ ಖಿನ್ನತೆಗೊಳಗಾದ ಈತ ಮನೆಯಿಂದಲೇ ಹೊರಬರುತ್ತಿಲಿಲ್ಲ.
ಮುಂಬೈನ ಫ್ಲ್ಯಾಟ್ ಒಂದರಲ್ಲಿ ವಾಸ ಮಾಡಿಕೊಂಡಿದ್ದ ಈತ ಮನೆಯೊಳಗೇ ಮೂರು ವರ್ಷಗಳಿಂದ ಲಾಕ್ ಮಾಡಿಕೊಂಡಿದ್ದ. ತನಗೆ ಬೇಕಾದ ಆಹಾರ ವಸ್ತುಗಳನ್ನು ಆನ್ ಲೈನ್ ಮೂಲಕ ಖರೀದಿ ಮಾಡುತ್ತಿದ್ದ. ಮನೆಯ ಹಾಲ್ ನಲ್ಲಿ ಒಂದು ಕುರ್ಚಿಯಿತ್ತು ಇದರಲ್ಲೇ ಈತ ಮಲಗಿ ನಿದ್ರಿಸುತ್ತಿದ್ದ ಎಂದು ತಿಳಿದುಬಂದಿದೆ. ಈತನ ಸಂಬಂಧಿಕರೂ ಕಳೆದ ಮೂರು ವರ್ಷಗಳಿಂದ ಈತನನ್ನು ಸಂಪರ್ಕಿಸಲು ಯತ್ನಿಸಿದರೂ ಆತ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ.
ಮನೆಯೊಳಗೇ ಕೂತು ಆತನ ಕಾಲುಗಳು ವ್ರಣವಾಗಿತ್ತು. ಸ್ನಾನ, ಶೌಚ ಸರಿಯಾಗಿ ಮಾಡದೇ ಭಿಕ್ಷುಕನಂತಾಗಿದ್ದ. ಇದೀಗ ಆತನನ್ನು ರಕ್ಷಿಸಿ ಪನ್ವೇಲ್ ನಲ್ಲಿರುವ ಆಶ್ರಮಕ್ಕೆ ದಾಖಲಿಸಲಾಗಿದೆ.