ನವದೆಹಲಿ: ಬಿಜೆಪಿಗೆ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ. ನನ್ನನ್ನು ಸೋಲಿಸಲು ಪ್ರಧಾನಿ ನರೇಂದ್ರ ಮೋದಿಗೆ ಇನ್ನೊಂದು ಜನ್ಮ ಬೇಕು ಎಂದಿದ್ದ ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದೆ.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಸೋಲಾಗಿದೆ. ಹಾಲಿ ಮುಖ್ಯಮಂತ್ರಿ ಆತಿಶಿ ಮಾತ್ರ ಕೊಂಚ ಅಂತರದಿಂದ ಜಯ ಸಾಧಿಸಿದ್ದಾರೆ.
2023ರಲ್ಲಿ ದೆಹಲಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಜೀವಮಾನದಲ್ಲಿ ಎಎಪಿಯನ್ನು ಎಂದಿಗೂ ಸೋಲಿಸುವುದಿಲ್ಲ ಎಂದು ಕೇಜ್ರಿವಾಲ್ ಹೇಳಿಕೊಂಡಿದ್ದರು. ಬಿಜೆಪಿ ಉದ್ದೇಶ ಎಎಪಿ ಸರ್ಕಾರವನ್ನು ಉರುಳಿಸುವುದಾಗಿದೆ. ನರೇಂದ್ರ ಮೋದಿ ದೆಹಲಿಯಲ್ಲಿ ಸರ್ಕಾರ ರಚಿಸಲು ಬಯಸುತ್ತಿದ್ದಾರೆ. ಚುನಾವಣೆಗಳ ಮೂಲಕ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿದಿದೆ. ನಾನು ನರೇಂದ್ರ ಮೋದಿ ಜಿ ಅವರಿಗೆ ಹೇಳಲು ಬಯಸುತ್ತೇನೆ, ಈ ಜನ್ಮದಲ್ಲಿ ನೀವು ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ. ದೆಹಲಿಯಲ್ಲಿ ನಮ್ಮನ್ನು ಸೋಲಿಸಲು ನಿಮಗೆ ಇನ್ನೊಂದು ಜನ್ಮ ಬೇಕು ಎಂದಿದ್ದರು.
ಹ್ಯಾಟ್ರಿಕ್ ಗೆಲುವಿನ ಕನಸುಕಂಡಿದ್ದ ಎಎಪಿಯ ಕನಸು ಭಗ್ನವಾಗಿದೆ. ಇದರಿಂದ ಎಎಪಿ ಕಚೇರಿಯಲ್ಲಿ ಮೌನ ಕವಿದಿದ್ದು, ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಂಭ್ರಮಾಚರಣೆ ಶುರುವಾಗಿದೆ. 27 ವರ್ಷದ ನಂತರ ಬಿಜೆಪಿ ದೆಹಲಿಯಲ್ಲಿ ಸರ್ಕಾರ ರಚಿಸಲು ಸಜ್ಜಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅರವಿಂದ್ ಕೇಜ್ರಿವಾಲ್ ಸೋತಿದ್ದಾರೆ. ಕೇಜ್ರಿವಾಲ್ ವಿರುದ್ಧ ಬಿಜೆಪಿಯ ಪರ್ವೇಶ್ ವರ್ಮಾಗೆ 3182 ಮತಗಳಿಂದ ಗೆಲುವು ಸಾಧಿಸಿದ್ದಾರೆ.