ಮಂಗಳೂರು: ಕೇರಳ-ಕರ್ನಾಟಕ ಗಡಿ ಭಾಗ ಕಾಸರಗೋಡಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾರು ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಅಪ್ಪ ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ.
ನಿನ್ನೆ ತಡರಾತ್ರಿ ಕಾಸರಗೋಡಿನಿಂದ ಮಂಗಳೂರಿಗೆ ತೆರಳುವ ಮಂಜೇಶ್ವರ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅಪಘಾತವಾಗಿದೆ. ನಿಯಂತ್ರಣ ತಪ್ಪಿದ ಕಾರು ಡಿವೈಡರ್ ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ತಂದೆ ಜನಾರ್ಧನ ಮಕ್ಕಳಾದ ವರುಣ್, ಕಿಶನ್ ಸಾವನ್ನಪ್ಪಿದ್ದಾರೆ. ರತ್ನಾ ಎಂಬವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಮೃತ ಕಿಶನ್ ಮಂಗಳೂರಿಗೆ ತೆರಳಬೇಕಿತ್ತು. ಅವರನ್ನು ಬಿಡಲು ಕಾರಿನಲ್ಲಿ ಕರೆದೊಯ್ಯುತ್ತಿದ್ದಾಗ ಘಟನೆ ಸಂಭವಿಸಿದೆ. ಮೃತರೆಲ್ಲರೂ ಉಪ್ಪಳದ ಬಾಯಿಕಟ್ಟೆ ನಿವಾಸಿಗಳು ಎಂದು ತಿಳಿದುಬಂದಿದೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.