ನ್ಯೂಯಾರ್ಕ್: ತಮ್ಮ ಜೊತೆ ಕಿತ್ತಾಡಿಕೊಂಡು ಹೋಗಿದ್ದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ ಕಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಕ್ಕ ಪಾಠ ಕಲಿಸಿದ್ದಾರೆ. ಉಕ್ರೇನ್ ಗೆ ನೀಡುತ್ತಿದ್ದ ಮಿಲಿಟರಿ ನೆರವು ನಿಲ್ಲಿಸಿದ್ದಾರೆ.
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ ಕಿ ಇತ್ತೀಚೆಗೆ ಅಮೆರಿಕಾಗೆ ಭೇಟಿ ನೀಡಿದ್ದರು. ಶ್ವೇತಭವನದಲ್ಲಿ ಟ್ರಂಪ್ ಜೊತೆಗೆ ಮಾಧ್ಯಮಗಳ ಮುಂದೆಯೇ ಇಬ್ಬರೂ ಕಿತ್ತಾಡಿಕೊಂಡಿದ್ದರು. ಈ ವಿಚಾರ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗಿತ್ತು.
ಇದೀಗ ಉಕ್ರೇನ್ ಮೇಲೆ ಸಿಟ್ಟಿಗೆದ್ದಿರುವ ಡೊನಾಲ್ಡ್ ಟ್ರಂಪ್ ಆ ದೇಶಕ್ಕೆ ನೀಡುತ್ತಿದ್ದ ಮಿಲಿಟರಿ ನೆರವನ್ನೇ ಬಂದ್ ಮಾಡಿದೆ. ಸದ್ಯಕ್ಕೆ ರಷ್ಯಾ ಜೊತೆ ಗುದ್ದಾಡುತ್ತಿರುವ ಉಕ್ರೇನ್ ಗೆ ಅಮೆರಿಕಾ ನೆರವು ನಿಂತಿರುವುದು ದೊಡ್ಡ ಹೊಡೆತ ನೀಡಲಿದೆ.
ಅಮೆರಿಕಾದಿಂದ ತೆರಳಿದ ಬಳಿಕ ವಿಡಿಯೋ ಸಂದೇಶದ ಮೂಲಕ ನಾವು ನಿತ್ಯವೂ ಅಮೆರಿಕಾಗೆ ಧನ್ಯವಾದ ಸಲ್ಲಿಸುತ್ತಲೇ ಇರುತ್ತೇವೆ ಎಂದು ತೇಪೆ ಹಾಕುವ ಕೆಲಸ ಮಾಡಿದ್ದರು. ಆದರೆ ಇದು ಯಾವುದಕ್ಕೂ ಟ್ರಂಪ್ ಮನಸ್ಸು ಕರಗಿಲ್ಲ. ಇದರೊಂದಿಗೆ ಸ್ವತಃ ಉಕ್ರೇನ್ ಶಾಂತಿ ಒಪ್ಪಂದಕ್ಕೆ ಒಪ್ಪಿಕೊಳ್ಳುವಂತೆ ಮಾಡಲು ಟ್ರಂಪ್ ಪರೋಕ್ಷವಾಗಿ ಒತ್ತಡ ಹಾಕಿದ್ದಾರೆ. ಅಮೆರಿಕಾ ನೀಡುತ್ತಿದ್ದ ಶಸ್ತ್ರಾಸ್ತ್ರಗಳ ನೆರವಿನಿಂದ ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಗೆ ಸಹಾಯವಾಗುತ್ತಿತ್ತು. ಆದರೆ ಈಗ ಅಮೆರಿಕಾ ಶಸ್ತ್ರಾಸ್ತ್ರ ನೆರವು ನೀಡದೇ ಹೋದಲ್ಲಿ ಉಕ್ರೇನ್ ಗೆ ಯುದ್ಧ ಮುಂದುವರಿಸಲು ಕಷ್ಟವಾಗಲಿದೆ. ಆಗ ಅನಿವಾರ್ಯವಾಗಿ ರಷ್ಯಾ ಜೊತೆ ಶಾಂತಿ ಒಪ್ಪಂದಕ್ಕೆ ಮುಂದಾಗಲಿದೆ. ಟ್ರಂಪ್ ಈ ಪ್ಲ್ಯಾನ್ ವರ್ಕೌಟ್ ಆಗುತ್ತಾ ನೋಡಬೇಕಿದೆ.