Publish Date: Wed, 11 Oct 2017 (16:50 IST)
Updated Date: Wed, 11 Oct 2017 (16:54 IST)
ನವದೆಹಲಿ: ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಉಗ್ರರಿಗೆ ಮದ್ದುಗುಂಡು ಸರಬರಾಜು ಮಾಡುತ್ತಿದ್ದ ಮೂವರನ್ನು ಜಮ್ಮು ಕಾಶ್ಮೀರ ಪೊಲೀಸರು ಶೋಫಿಯಾನ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ವಿಪರ್ಯಾಸವೆಂದರೆ ಇದರಲ್ಲಿ ಇಬ್ಬರು ಪೊಲೀಸ್ ಪೇದೆಗಳು ಶಾಮೀಲಾಗಿದ್ದಾರೆ.
ಬಂಧಿತ ಪೇದೆಗಳನ್ನು ಶಬೀರ್ ಅಹ್ಮದ್ ಮಲಿಕ್ ಮತ್ತು ನಾಝಿರ್ ಅಹ್ಮದ್ ಎಂದು ಗುರುತಿಸಲಾಗಿದೆ. ಮತ್ತೋರ್ವ ಆರೋಪಿ ಆದಿಲ್ ಅಹ್ಮದ್ ಎನ್ನಲಾಗಿದೆ. ಈ ಮೂವರು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯೊಂದಿಗೆ ಸಕ್ರಿಯರಾಗಿದ್ದರು ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಸರ್ಕಾರ ನೀಡಿದ್ದ ಮದ್ದುಗುಂಡುಗಳನ್ನು ಉಗ್ರರಿಗೆ ನೀಡಲು ತೆರಳಿದ್ದ ಸಂದರ್ಭದಲ್ಲಿ ಆದಿಲ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ತನ್ನೊಂದಿಗೆ ಶಬೀರ್ ಮತ್ತು ನಾಝಿರ್ ಕೈಜೋಡಿಸಿರುವುದಾಗಿ ಬಾಯ್ಬಿಟ್ಟಿದ್ದಾನೆ. ಆರೋಪಿಗಳಿಂದ ಎಕೆ-47 ರೈಫಲ್ ಬಂದೂಕು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಕುರಿತು ಮತ್ತಷ್ಟು ತೀವ್ರ ವಿಚಾರಣೆ ನಡೆಯುತ್ತಿದೆ.