ನವದೆಹಲಿ : ಅನೇಕ ವೈದ್ಯರು ಹಾಗೂ ವೈದ್ಯಕೀಯ ವೃತ್ತಿಪರರು ಸಲಿಂಗ ಸಂಬಂಧ ಒಂದು ಅಸ್ವಸ್ಥತೆ ಎಂಬ ಅಭಿಪ್ರಾಯ ಹೊಂದಿದ್ದಾರೆ. ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದರೆ ಅದು ಸಮಾಜದಲ್ಲಿ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಆರ್ಎಸ್ಎಸ್ ಮಹಿಳಾ ವಿಭಾಗದ ಅಂಗ ಸಂಸ್ಥೆ ಸಂವರ್ಧಿನಿ ನ್ಯಾಸ್ ತನ್ನ ಸಮೀಕ್ಷೆಯ ವರದಿಯಲ್ಲಿ ತಿಳಿಸಿದೆ.
ಅಧುನಿಕ ವಿಜ್ಞಾನದ ಎಂಟು ವಿಭಿನ್ನ ಚಿಕಿತ್ಸಾ ಕಾರ್ಯದಲ್ಲಿ ತೊಡಗಿರುವ 318 ವೈದ್ಯರಿಂದ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿ ಸಂಶೋಧನಾ ವರದಿ ತಯಾರಿಸಲಾಗಿದೆ. ಇದರಲ್ಲಿ 70% ನಷ್ಟು ವೈದ್ಯರು ಸಲಿಂಗ ಸಂಬಂಧ ಒಂದು ಅಸ್ವಸ್ಥತೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ 83% ಸಲಿಂಗ ಸಂಬಂಧ ಹೊಂದಿರುವ ವ್ಯಕ್ತಿಗಳಿಗೆ ಲೈಂಗಿಕ ರೋಗಗಳು ಹರಡುವುದು ವರದಿಯಿಂದ ದೃಡಪಟ್ಟಿದೆ ಎಂದು ರಾಷ್ಟ್ರ ಸೇವಿಕಾ ಸಮಿತಿಯ ಹಿರಿಯ ಕಾರ್ಯನಿರ್ವಹಣಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಮೀಕ್ಷೆಯ ಪ್ರಶ್ನಾವಳಿಗೆ ಪ್ರತಿಕ್ರಿಯಿಸಿದ 67% ಕ್ಕಿಂತ ಹೆಚ್ಚು ವೈದ್ಯರು ಸಲಿಂಗ ಸಂಬಂಧದ ಪೋಷಕರು ತಮ್ಮ ಸಂತತಿಯನ್ನು ಸರಿಯಾಗಿ ಬೆಳೆಸಲು ಸಾಧ್ಯವಿಲ್ಲ ಎಂದು ಭಾವಿಸಿದ್ದಾರೆ. ಅಂತಹ ಮಾನಸಿಕ ಅಸ್ವಸ್ಥತೆಯ ರೋಗಿಗಳನ್ನು ಗುಣಪಡಿಸಲು ಸಮಾಲೋಚನೆ ಉತ್ತಮ ಆಯ್ಕೆಯಾಗಿದೆ.
ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ಬೇಡಿಕೆಯ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಸಾರ್ವಜನಿಕ ಅಭಿಪ್ರಾಯವನ್ನು ತೆಗೆದುಕೊಳ್ಳಬೇಕು ಎಂದು ಸಂವರ್ಧಿನಿ ನ್ಯಾಸ್ ಅವರ ಸಮೀಕ್ಷೆ ಶಿಫಾರಸು ಮಾಡಿದೆ.