ಗುಜರಾತ್: ಬುಧವಾರ ರಾತ್ರಿ ಗುಜರಾತ್‌ನ ಇಲ್ಲಿನ ಒಂದು ಕುಟುಂಬವೊಂದು ಮಲಗಿದ್ದ ವೇಳೆ, ಮನೆಯೊಳಗೆ ಸಿಂಹವೊಂದು ಎಂಟ್ರಿಕೊಟ್ಟು, ಅಡುಗೆ ಕೋಣೆಯ ಗೋಡೆಯ ಮೇಲೆ ಕೂತು ರಿಲ್ಯಾಕ್ಸ್ ಆಗುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಈ ಘಟನೆ ಗುಜರಾತ್‌ನ ಅಮ್ರೇಲಿಯಲ್ಲಿರುವ ಮುಲುಭಾಯಿ ರಾಮ್‌ಭಾಯ್ ಲಖನ್ನೋತ್ರಾ ಅವರ ಮನೆಯಲ್ಲಿ ನಡೆದಿದೆ. ರಾತ್ರಿ ವೇಳೆ ಮನೆಯವರು ಮಲಗಿದ್ದ ವೇಳೆ ಸಿಂಹ ಮನೆಯೊಳಗೆ ಬಂದು ಅಡುಗೆ ಕೋಣೆ ಸೇರಿದೆ. ಇದನ್ನು ನೋಡಿ ಮನೆಯವರು ಭಯಭೀತರಾಗಿದ್ದಾರೆ. ಮನೆಯವರ ಚೀರಾಟಕ್ಕೆ ನೆರೆಹೊರೆಯವರು ಓಡಿ ಬಂದು ವರನ್ನು ಸುರಕ್ಷಿತವಾಗಿ ಮನೆಯಿಂದ ಹೊರಕರೆದುಕೊಂಡು ಹೋಗಿದ್ದಾರೆ.
ವೈರಲ್ ಆಗಿರುವ ವೀಡಿಯೊದಲ್ಲಿ ಗೋಡೆಯ ಮೇಲೆ ಕುಳಿತು ಅಡುಗೆಮನೆಯೊಳಗೆ ಇಣುಕುತ್ತಿರುವ ಸಿಂಹವನ್ನು ತೋರಿಸಲಾಗಿದೆ. ಗ್ರಾಮಸ್ಥರೊಬ್ಬರು ಲೈಟ್ ಅನ್ನು ಸಿಂಹದ ಮುಖದ ಮೇಲೆ ಹಾಕಿದಾಗ ಅದು ಸುತ್ತಲೂ ನೋಡುತ್ತಿರುವುದನ್ನು ಕಾಣಬಹುದು. ಎರಡು ಗಂಟೆಗಳ ಕಾಲ ಅಡಗಿದ್ದ ಸಿಂಹವನ್ನು ಗ್ರಾಮಸ್ಥರು ಅಂತಿಮವಾಗಿ ಓಡಿಸಿದರು. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
'ಕಾಡಿನ ರಾಜ' ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಫೆಬ್ರವರಿಯ ಆರಂಭದಲ್ಲಿ, ಇದೇ ಜಿಲ್ಲೆಯಲ್ಲಿ, ಗುಜರಾತ್‌ನ ಭಾವನಗರ-ಸೋಮನಾಥ್ ಹೆದ್ದಾರಿಯಲ್ಲಿ ಏಷ್ಯಾಟಿಕ್ ಸಿಂಹವೊಂದು ರಸ್ತೆಯಲ್ಲಿ ನಡೆದುಕೊಂಡು ಹೋಗಿದ್ದ ವಿಡಿಯೋ ವೈರಲ್ ಆಗಿತ್ತು.