ಅಹಮ್ಮದಾಬಾದ್: ಎರಡು ದಿನಗಳ ಎಐಸಿಸಿ ಅಧಿವೇಶನದಲ್ಲಿ ಮಾತನಾಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ದೇಶದಲ್ಲಿ ಅಕ್ರಮವಾಗಿ ಚುನಾವಣೆಗಳನ್ನು ಗೆಲ್ಲುತ್ತಿದೆ. ಹೀಗಾಗಿ ಮತ್ತೆ ಮತಪತ್ರ ವಿಧಾನದ ಮೂಲಕ ಚುನಾವಣೆಗಳು ನಡೆಯಬೇಕು. ಹೀಗೇ ಮುಂದುವರಿದರೆ ಮುಂದೆ ಮೋದಿ ದೇಶವನ್ನೇ ಮಾರುತ್ತಾರೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಅಹಮ್ಮದಾಬಾದ್ ನಲ್ಲಿ ನಡೆಯುತ್ತಿರುವ ಎಐಸಿಸಿ ಅಧಿವೇಶನದಲ್ಲಿ ಇಂದು ಭಾಷಣ ಮಾಡಿರುವ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಅಕ್ರಮವಾಗಿ ಮತಯಂತ್ರದ ಮೂಲಕ ಚುನಾವಣೆ ಗೆದ್ದಿತು. ಇದೇ ರೀತಿ ಬಿಜೆಪಿ ಅನೇಕ ಚುನಾವಣೆಗಳನ್ನು ಅಕ್ರಮವಾಗಿ ಗೆದ್ದಿದೆ. ಇದಕ್ಕೆ ಪರಿಹಾರವೆಂದರೆ ಮತಪತ್ರ. ಹಿಂದಿನ ಕಾಲದಂತೆ ಮತ್ತೆ ಮತಪತ್ರದ ಮೂಲಕ ಚುನಾವಣೆಗಳು ನಡೆಯಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದಿದ್ದಾರೆ.
ಮೋದಿ ಸರ್ಕಾರ ಸರ್ಕಾರೀ ಆಸ್ತಿಗಳನ್ನು ಕೆಲವು ಬಂಡವಾಳಶಾಹಿಗಳಿಗೆ ಮಾರಾಟ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ನಿಧಾನವಾಗಿ ಕೊಲ್ಲುತ್ತಿದೆ. ಇಡೀ ಜಗತ್ತೇ ಈಗ ಇವಿಎಂ ಯಂತ್ರದಿಂದ ಬ್ಯಾಲೆಟ್ ಪೇಪರ್ ಕಡೆಗೆ ಸಾಗುತ್ತಿದೆ.
ಇದರ ಬಗ್ಗೆ ಪ್ರಶ್ನಿಸಲು ಹೋದರೆ ಇವಿಎಂ ದೋಷ ಸಾಬೀತುಪಡಿಸಿ ಎನ್ನುತ್ತಾರೆ. ಆದರೆ ಅವರು ಇವಿಎಂ ಯಂತ್ರಗಳಿಂದ ಆಡಳಿತ ಪಕ್ಷಕ್ಕೆ ಉಪಯೋಗವಾಗಿ ವಿರೋಧ ಪಕ್ಷಕ್ಕೆ ಹಿನ್ನಡೆಯಾಗುವಂತೆ ಸೆಟ್ ಮಾಡಿದ್ದಾರೆ ಎಂದು ಖರ್ಗೆ ಆರೋಪಿಸಿದ್ದಾರೆ.
ಮಹಾರಾಷ್ಟ್ರ ಚುನಾವಣೆಯೇ ಅಕ್ರಮವಾಗಿತ್ತು. ಅಲ್ಲಿ ವೋಟರ್ ಲಿಸ್ಟ್ ನಲ್ಲಿ ಏನಿತ್ತು? ಇವಿಎಂ ಯಂತ್ರಗಳು ದೋಷಪೂರಿತವಾಗಿತ್ತು. ಇದರ ಬಗ್ಗೆ ರಾಹುಲ್ ಗಾಂಧಿಯವರು ಪ್ರಬಲವಾಗಿ ಧ್ವನಿಯೆತ್ತಿದ್ದರು. ಹರ್ಯಾಣದಲ್ಲೂ ಇದೇ ರೀತಿ ಆಗಿದೆ. ಕಳ್ಳ ಯಾವತ್ತಿದ್ದರೂ ಸಿಕ್ಕಿಬೀಳಲೇಬೇಕು. ನಮ್ಮ ಲಾಯರ್ ಗಳು, ನಾಯಕರು ಸತ್ಯ ಶೋಧನೆಯ ಹಾದಿಯಲ್ಲಿದ್ದಾರೆ.
ಕಳೆದ 11 ವರ್ಷಗಳಿಂದ ಆಡಳಿತ ಪಕ್ಷ ಸಂವಿಧಾನದ ಮೇಲೆ ದಾಳಿ ಮಾಡುತ್ತಲೇ ಇದೆ. ಸಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿಯಾಗುತ್ತಲೇ ಇದೆ. ಇದನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮದು. ಲೋಕಸಭೆಯಲ್ಲಿ ಬಜೆಟ್ ಸೆಷನ್ ವೇಳೆ ಸ್ಪೀಕರ್ ವಿರೋಧ ಪಕ್ಷದ ನಾಯಕನ ಹೆಸರು ಸೂಚಿಸಿದರೂ ಮಾತನಾಡಲು ಅವಕಾಶ ಕೊಡಲಿಲ್ಲ. ಇದು ಎಂಥಾ ವ್ಯವಸ್ಥೆ? ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶ ಕೊಡಲಿಲ್ಲವೆಂದರೆ ಜನರ ಸಮಸ್ಯೆಗಳು ಅರಿವಾಗುವುದಾದರೂ ಹೇಗೆ? ಅಮೆರಿಕಾ ಭಾರತದ ಮೇಲೆ ವಿಧಿಸುತ್ತಿರುವ ಸುಂಕದ ಬಗ್ಗೆಯೂ ಮಾತನಾಡಲು ಬಿಡಲಿಲ್ಲ. ಎಸ್ ಸಿ/ಎಸ್ ಟಿ, ಒಬಿಸಿ ಸೇರಿದಂತೆ ಹಿಂದುಳಿದ ವರ್ಗದವರ ಮೀಸಲಾತಿಯನ್ನು ನಿಧಾನವಾಗಿ ಕೊನೆಗೊಳಿಸಲಾಗುತ್ತದೆ. ಇದೇ ರೀತಿ ಮುಂದುವರಿದರೆ ಮುಂದೊಮ್ಮೆ ಮೋದಿ ದೇಶವನ್ನೇ ಮಾರುತ್ತಾರೆ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.