ನವದೆಹಲಿ: ದೆಹಲಿಯ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿರುವ ರೇಖಾ ಗುಪ್ತಾ ಅವರು ಅದಕ್ಕೂ ಮುನ್ನ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಬಿಜೆಪಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಬುಧವಾರ ರೇಖಾ ಗುಪ್ತಾ ಆಯ್ಕೆಯಾಗಿದ್ದರು.
ದೆಹಲಿ ವಿಧಾನಸಭಾ ಚುನಾವಣೆಯ ವೇಳೆ ನೀಡಿದ ಚುನಾವಣೆ ಭರವಸೆಯಂತೆ ಮಹಿಳೆಯರಿಗೆ ಮಾಸಿಕ ₹2,500 ಆರ್ಥಿಕ ನೆರವು ನೀಡುವ ಕುರಿತು ಮಹತ್ವದ ಅಪ್‌ಡೇಟ್ ನೀಡಿದ್ದಾರೆ. ಮಾರ್ಚ್ 8 ಮಹಿಳಾ ದಿನಾಚರಣೆಯಿದ್ದು, ಅದಕ್ಕೂ ಮುನ್ನವೇ ಮಹಿಳೆಯರ ಖಾತೆಗೆ ಮೊದಲ ಕಂತಿನ ಹಣ ಜಮೆ ಮಾಡುವ ಭರವಸೆ ನೀಡಿದ್ದಾರೆ.
ರಾಜಧಾಣಿಯ ಚುನಾವಣೆ ಸಂದರ್ಭ ಪ್ರಣಾಳಿಕೆ ಸಂಕಲ್ಪ ಪತ್ರ ಬಿಡುಗಡೆ ಮಾಡಿದ್ದ ಪಕ್ಷದ ರಾಷ್ಟ್ರಿಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು, ಮಹಿಳೆಯರಿಗೆ ಮಾಸಿಕ ₹2,500 ಆರ್ಥಿಕ ನೆರವು, ಗರ್ಭಿಣಿಯರಿಗೆ ₹21,000 ನೆರವು, ಹಿರಿಯ ನಾಗರಿಕರಿಗೆ ₹2,500 ಪಿಂಚಣಿ ಮತ್ತು ಬಡವರಿಗೆ ₹500ಕ್ಕೆ ಅಡುಗೆ ಅನಿಲ ನೀಡುವುದಾಗಿ ಭರವಸೆ ನೀಡಿದ್ದರು. ಅದರಲ್ಲಿ ಮೊದಲ ಘೋಷಣೆ ಅನುಷ್ಠಾನಕ್ಕೆ ಸಿದ್ಧತೆ ನಡೆಸಿದೆ.
ದೆಹಲಿ ಚುನಾವಣೆಯಲ್ಲಿ ಬಿಜೆಪಿ ಪಕ್ಷವು 48 ಸ್ಥಾನಗಳನ್ನು ಅಧಿಕಾರ ಪಡೆದಿದೆ. ಆಡಳಿತರೂಢ ಆಮ್ ಆದ್ಮಿ ಪಕ್ಷ 22 ಸ್ಥಾನಗಳನ್ನು ಪಡೆಯಲಷ್ಟೇ ಶಕ್ತವಾಗಿದೆ.
ನರೇಂದ್ರ ಮೋದಿ ಅವರ ಕನಸನ್ನು ನನಸು ಮಾಡುವುದು ದೆಹಲಿಯ ಎಲ್ಲಾ 48 ಬಿಜೆಪಿ ಶಾಸಕರ ಜವಾಬ್ದಾರಿಯಾಗಿದೆ. ಮಹಿಳೆಯರಿಗೆ ಆರ್ಥಿಕ ನೆರವು ಸೇರಿದಂತೆ ನಮ್ಮ ಎಲ್ಲಾ ಭರವಸೆಗಳನ್ನು ನಾವು ಖಂಡಿತವಾಗಿಯೂ ಈಡೇರಿಸುತ್ತೇವೆ ಎಂದು ಅವರು ಹೇಳಿದ್ದಾರೆ.