Publish Date: Fri, 29 Apr 2022 (07:43 IST)
Updated Date: Fri, 29 Apr 2022 (08:45 IST)
ಪಾಟ್ನಾ : ತವರು ಮನೆಯಿಂದ ಪತ್ನಿಯನ್ನು ಕರೆದುಕೊಂಡು ಬರಲು ಹೋಗಿದ್ದ ವ್ಯಕ್ತಿಯೊಬ್ಬ,
ತನ್ನ ಹೆಂಡತಿ ಮನೆಗೆ ಬರಲು ನಿರಾಕರಿಸಿದ ನಂತರ ವ್ಯಕ್ತಿ ತನ್ನ ನಾದಿನಿಯೊಂದಿಗೆ ಪರಾರಿಯಾಗಿರುವ ಘಟನೆ ಬಿಹಾರದ ಛಪ್ರಾ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ಕೃಷ್ಣರಾಮ್ ಎಂಬ ವ್ಯಕ್ತಿ ತನ್ನ ಹೆಂಡತಿ ಸಂಕಾಂತಿ ದೇವಿಯನ್ನು ಮರಳಿ ಕರೆತರಲು ಅತ್ತೆಯ ಮನೆಗೆ ಹೋಗಿದ್ದಾಗ, ಆಕೆ ಅವನೊಂದಿಗೆ ಬರಲು ನಿರಾಕರಿಸಿದ್ದಾಳೆ. ಇದರಿಂದ ಕೃಷ್ಣರಾಮ್ ತನ್ನ ಅಪ್ರಾಪ್ತ ನಾದಿನಿಯನ್ನು ಪುಸಲಾಯಿಸಿ, ಸುಳ್ಳು ಭರವಸೆ ನೀಡಿ ಆಕೆಯೊಂದಿಗೆ ಓಡಿ ಹೋಗಿದ್ದಾನೆ.
ತನ್ನ ಮಗಳನ್ನು ಅಪಹರಿಸಿದ್ದಕ್ಕಾಗಿ ಹುಡುಗಿಯ ತಂದೆ ತಕ್ಷಣವೇ ಕೃಷ್ಣರಾಮ್ ವಿರುದ್ಧ ದೂರು ದಾಖಲಿಸಿದ್ದಾರೆ. ಆದರೆ, ವಿಷಯ ಮಹಿಳಾ ಸಹಾಯವಾಣಿಗೆ ತಲುಪಿದಾಗ, ಅಪ್ರಾಪ್ತ ಹುಡುಗಿ ಸ್ವಂತ ಕುಟುಂಬದ ವಿರುದ್ಧವೇ ಬಾಲ್ಯ ವಿವಾಹದ ಆರೋಪ ಮಾಡಿರುವುದು ಕಂಡುಬಂದಿದೆ.
ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿದ ನಂತರವೇ ಸತ್ಯಾಂಶ ತಿಳಿದು ಬಂದಿದೆ. ಅಲ್ಲದೆ, ರಾಮ್ ಅಪ್ರಾಪ್ತ ಹುಡುಗಿಯನ್ನು ಮಹಿಳಾ ಮತ್ತು ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ಕರೆದೊಯ್ದು ಅಲ್ಲಿ ಕುಟುಂಬದ ವಿರುದ್ಧವೇ ಸುಳ್ಳು ದೂರು ದಾಖಲಿಸುವಂತೆ ಮಾಡಿದ್ದಾನೆ ಎನ್ನುವುದೂ ಗೊತ್ತಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ರಾಮ್ ನನ್ನು ಬಂಧಿಸಿದ್ದಾರೆ. ಆರೋಪಿ ರಾಮ್ಗೆ ಕಳೆದ 12 ವರ್ಷಗಳಿಂದ ಸಂಕಾಂತಿ ದೇವಿ ಅವರೊಂದಿಗೆ ಸಂಸಾರ ನಡೆಸುತ್ತಿದ್ದ. ಈತನಿಗೆ 4 ಮಕ್ಕಳಿದ್ದಾರೆ.