ತಮಿಳುನಾಡು: ತಮಿಳುನಾಡಿನಲ್ಲಿ ಪಟಾಕಿ ದುರಂತಗಳು ಒಂದಂರ ಮೇಲೆ ಒಂದು ನಡೆಯುತ್ತಲೇ ಇದೆ. ಇಲ್ಲಿನ ವಿರುಧುನಗರ ಜಿಲ್ಲೆಯ ಸತ್ತೂರು ಪ್ರದೇಶದಲ್ಲಿ ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಇಂದು ಸ್ಫೋಟ ಸಂಭವಿಸಿದೆ.
ಈ ದುರ್ಘಟನೆಯಲ್ಲಿ ಹಲವರು ಸಿಲುಕಿಕೊಂಡಿದ್ದು, ಆರು ಮಂದಿಯ ಶವ ಪತ್ತೆಯಾಗಿದೆ. ಬಹುತೇಕ ಶವಗಳು ಸುಟ್ಟು ಕರಕಲಾಗಿವೆ. ಇನ್ನೂ ಹಲವು ಮಂದಿ ದುರಂತದಲ್ಲಿ ಸಿಲುಕಿರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಆರು ಪುರುಷರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಅವರ ಗುರುತುಗಳು ಇನ್ನೂ ಪತ್ತೆಯಾಗಿಲ್ಲ. ಶವಗಳನ್ನು ಶವಪರೀಕ್ಷೆಗಾಗಿ ವಿರುಧುನಗರದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ಸಂಭವಿಸಿದ ಮೊದಲ ಪಟಾಕಿ ಅಪಘಾತ ಇದಾಗಿದೆ.
ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ಸಿಬ್ಬಂದಿ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕಾರ್ಖಾನೆ ಪರವಾನಗಿ ಹೊಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಸಾಯನಿಕಗಳನ್ನು ಬೆರೆಸುವ ಪ್ರಕ್ರಿಯೆಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮೇ 9 ರಂದು ತಮಿಳುನಾಡಿನ ಶಿವಕಾಶಿ ಬಳಿಯ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ್ದ ಭಾರೀ ಸ್ಫೋಟದಲ್ಲಿ 8 ಮಂದಿ ಸಾವನ್ನಪ್ಪಿದ್ದರು.