ನವದೆಹಲಿ: ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಆಕ್ಷೇಪಣೆಯ ಮಧ್ಯೆಯೇ ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ನೇಮಕಗೊಂಡಿದ್ದಾರೆ.
ಹಾಲಿ ಆಯುಕ್ತ ರಾಜೀವ್ ಕುಮಾರ್ ಅವರು ಇಂದು ನಿವೃತ್ತರಾಗಲಿದ್ದು, ಅವರಿಂದ ತೆರವಾಸ ಸ್ಥಾನಕ್ಕೆ ಕಳೆದ ವರ್ಷದ ಮಾರ್ಚ್‌ನಲ್ಲಿ ಚುನಾವಣಾ ಆಯುಕ್ತರಾಗಿ ನೇಮಕಗೊಂಡಿದ್ದ ಜ್ಞಾನೇಶ್ ಕುಮಾರ್ ನೇಮಕವಾಗಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತರ ಆಯ್ಕೆ ಸಂಬಂಧ ಸೋಮವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯು ಜ್ಞಾನೇಶ್ ಕುಮಾರ್ ಅವರು ಹೆಸರನ್ನು ಅಂತಿಮಗೊಳಿಸಿತ್ತು. ಆ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಹಾಗೂ ರಾಹುಲ್ ಗಾಂಧಿ ಭಾಗಿಯಾಗಿದ್ದರು.
ಮುಖ್ಯ ಚುನಾವಣಾ ಆಯುಕ್ತ ಹಾಗೂ ಚುನಾವಣಾ ಆಯುಕ್ತರ ನೇಮಕ ಕುರಿತ ಹೊಸ ನೇಮಕಾತಿ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಕೆಲವೇ ದಿನಗಳಲ್ಲಿ ವಿಚಾರಣೆ ನಡೆಸಲಿದೆ. ಹೀಗಾಗಿ, ಫೆಬ್ರವರಿ 19ರವರೆಗೆ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ರಾಹುಲ್ ಗಾಂಧಿ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು.
ಜ್ಞಾನೇಶ್ ಕುಮಾರ್ ಅವರು 2029ರ ಜನವರಿ 26ರವರೆಗೆ ಹುದ್ದೆಯಲ್ಲಿ ಇರಲಿದ್ದಾರೆ. ಮುಂದಿನ 20 ವಿಧಾನಸಭಾ ಚುನಾವಣೆಗಳು, 2027ರ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಗಳು ಮತ್ತು 2029ರ ಲೋಕಸಭಾ ಚುನಾವಣೆಯ ಸಿದ್ಧತೆಗಳಿಗೆ ಅವರು ಆಯೋಗವನ್ನು ಮುನ್ನಡೆಸಲಿದ್ದಾರೆ.
ಜ್ಞಾನೇಶ್ ಅವರಿಂದ ತೆರವಾದ ಚುನಾವಣಾ ಆಯುಕ್ತರ ಸ್ಥಾನಕ್ಕೆ 1989ರ ತಂಡದ ಹರಿಯಾಣ ಕೇಡರ್ ಭಾರತೀಯ ಆಡಳಿತ ಸೇವೆ ಅಧಿಕಾರಿ ವಿವೇಕ್ ಜೋಶಿ ಅವರನ್ನು ನೇಮಿಸಲಾಗಿದೆ.