ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್, ಕೆಎನ್ ರಾಜಣ್ಣ, ಸತೀಶ್ ಜಾರಕಿಹೊಳಿ ಮುಂತಾದ ನಾಯಕರ ಬಳಿಕ ಈಗ ಪರಮೇಶ್ವರ್ ಸರದಿ. ಹೈಕಮಾಂಡ್ ಮುಂದೆ ರಾಜ್ಯ ನಾಯಕರು ಇತ್ತೀಚೆಗೆ ಕ್ಯೂ ನಿಲ್ಲುತ್ತಿದ್ದಾರೆ.
ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಿಎಂ ಬದಲಾವಣೆ ಕುರಿತು ಚರ್ಚೆಗಳಾಗುತ್ತಿರುವ ಬೆನ್ನಲ್ಲೇ ರಾಜ್ಯ ನಾಯಕರು ಒಬ್ಬೊಬ್ಬರಾಗಿ ಹೈಕಮಾಂಡ್ ಭೇಟಿ ಮಾಡಿ ಬರುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಈಗಾಗಲೇ ರಾಜ್ಯದಲ್ಲಿ ದಲಿತರಿಗೆ ನಾಯಕ ಪಟ್ಟ ನೀಡಬೇಕು ಎಂಬ ಕೂಗು ಕೇಳಿಬಂದಿದೆ. ಕೆಎನ್ ರಾಜಣ್ಣ, ಸತೀಶ್ ಜಾರಕಿಹೊಳಿ ಮುಂತಾದವರು ಈ ಬಗ್ಗೆ ಹೈಕಮಾಂಡ್ ಮುಂದೆ ತಮ್ಮ ಬೇಡಿಕೆಯಿಟ್ಟಿದ್ದಾರೆ.
ಗೃಹಸಚಿವ ಜಿ ಪರಮೇಶ್ವರ್ ಕೂಡಾ ಇಂದು ದೆಹಲಿಗೆ ತೆರಳಿದ್ದಾರೆ. ದೇವನಹಳ್ಳಿ ವಿಮಾನ ನಿಲ್ದಾಣದಿಂದ ಪರಮೇಶ್ವರ್ ದೆಹಲಿಗೆ ತೆರಳಿದ್ದಾರೆ. ಈ ವೇಳೆ ಮಾಧ್ಯಮಗಳು ಮಾತನಾಡಿಸಲು ಯತ್ನಿಸಿದರೂ ಮಾತನಾಡದೇ ತೆರಳಿದ್ದಾರೆ. ಹೀಗಾಗಿ ಅವರ ಭೇಟಿ ಉದ್ದೇಶವೇನಿರಬಹುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.