ದೇಶದ ಜನರಿಗಾಗಿ ನಿಮ್ಮ ಸೇವೆ ಮುಡಿಪಾಗಿರಲಿ ಎಂದು ಇಂದು ವೈದ್ಯ ವೃತ್ತಿಗೆ ಪಾದಾರ್ಪಣೆ ಮಾಡುತ್ತಿರುವ ಯುವ ವೈದ್ಯರಿಗೆ ಮುಖ್ಯಮಂತ್ರಿಗಳು ಕಿವಿಮಾತು ಹೇಳಿದರು.
ಆದಿಚುಂಚನಗಿರಿ ಇನ್ನ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಶ್ರೀ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿರುವ ಶ್ರೀ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪದವಿ ಪ್ರದಾನ ಸಮಾರಂಭ ಹಾಗೂ ಹೃದಯ ವಿಜ್ಞಾನ ವಿಭಾಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಲಿಕೆ ಒಂದು ನಿರಂತರ ಪ್ರಕ್ರಿಯೆ. ನಿಜಜೀವನದಲ್ಲಿ ಮೊದಲು ಪರೀಕ್ಷೆ ನಂತರ ಕಲಿಕೆಯಿರುತ್ತದೆ. ನೋವನ್ನು ತೆಗೆದು ಶಮನ ಮಾಡುವ ಶಕ್ತಿಯನ್ನು ವೈದ್ಯವೃತ್ತಿ ಹೊಂದಿದೆ. ಇತರಿಗಾಗಿ ಜೀವಿಸುವುದೇ ವೈದ್ಯ ವೃತ್ತಿಯ ಉದಾರತೆಯಾಗಿದೆ. ದೈವಶಕ್ತಿಯ ಪ್ರತಿನಿಧಿಯಾಗಿರುವ ವೈದ್ಯರಲ್ಲಿ ದೈವತ್ವದ ಗುಣ, ಕರುಣೆ, ಮಾನವೀಯತೆ ಇರಬೇಕು. ಸಾಧನೆ.ಸಾಧಕನಿಗೆ ಸಾವು ಅಂತ್ಯವಲ್ಲ. ಸಾಧನೆಯ ನಂತರವೂ ಬದುಕುವವನು ಸಾಧಕ. ನಿಮ್ಮ ಸಾಧನೆಗಳು ಚಿರಸ್ಥಾಯಿಯಾಗಿರಬೇಕು. ತರ್ಕಬದ್ಧವಾಗಿ ಯೋಚಿಸಿ, ಕರುಣೆಯಿಂದ ನಿರ್ಣಯಿಸಿ ಎಂದು ತಿಳಿಸಿದರು.