Publish Date: Fri, 14 Jan 2022 (17:42 IST)
Updated Date: Fri, 14 Jan 2022 (19:45 IST)
ಚೆನ್ನೈ : 10 ತಿಂಗಳ ಮಗುವನ್ನು ಆಂಧ್ರಪ್ರದೇಶದ ದಂಪತಿಗೆ 3 ಲಕ್ಷ ರೂ. ಗೆ ಮಾರಾಟ ಮಾಡಿರುವ ಪ್ರಕರಣ ಸಂಬಂಧ ತಾಯಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.
ಕನ್ನಗಿ ನಗರದ ವಿಜಯಲಕ್ಷ್ಮಿ (30) ಮತ್ತು ಆಕೆಯ ಪತಿ ಚಿಂದೂರೈ (35) ಬಡತನದ ಕಾರಣದಿಂದ ತಮ್ಮ ಹತ್ತು ತಿಂಗಳ ಹಸುಳೆ ಮುತ್ತುರಾಜ್ ನನ್ನು ಮಾರಾಟ ಮಾಡಿದ್ದಾರೆ. ದಂಪತಿ ತಮ್ಮ ಮಗುವನ್ನು ಮಹಿಳಾ ಬ್ರೋಕರ್ ಒಬ್ಬರ ಮೂಲಕ ಆಂಧ್ರ ಪ್ರದೇಶದ ದಂಪತಿಗೆ 85,000 ರೂ. ಗೆ ನೀಡಲು ಒಪ್ಪಿಕೊಂಡಿದ್ದರು.
ನಂತರ ದಂಪತಿ ಬ್ರೋಕರ್ಗೆ ಹೆಚ್ಚುವರಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಆದರೆ ಮೊದಲಿಗೆ ಬ್ರೋಕರ್, ದಂಪತಿಯ ಬೇಡಿಕೆಗೆ ಒಪ್ಪಿರಲಿಲ್ಲ. ದಂಪತಿಗೆ 3 ಲಕ್ಷ ರೂ. ಗೆ ಮಗುವನ್ನು ಮಾರಾಟ ಮಾಡಿದ್ದಾಳೆ.
ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿ ಲಲಿತಾ ಅವರಿಗೆ ಶಿಶು ಮಾರಾಟದ ಬಗ್ಗೆ ತಿಳಿದಿದ್ದು, ಲಲಿತಾ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.