Select Your Language

Notifications

webdunia
webdunia
webdunia
webdunia

ಬೇರೆ ರಾಜ್ಯದಿಂದ ಬೆಂಗಳೂರಿನ ಅಪಾರ್ಟ್ಮೆಂಟ್ಗೆ ಹಿಂದಿರುಗಲು ಕೊರೊನಾ ನೆಗೆಟಿವ್ ವರದಿ ಕಡ್ಡಾಯ..!

ಬೇರೆ ರಾಜ್ಯದಿಂದ ಬೆಂಗಳೂರಿನ ಅಪಾರ್ಟ್ಮೆಂಟ್ಗೆ ಹಿಂದಿರುಗಲು ಕೊರೊನಾ ನೆಗೆಟಿವ್ ವರದಿ ಕಡ್ಡಾಯ..!
ಬೆಂಗಳೂರು , ಸೋಮವಾರ, 16 ಆಗಸ್ಟ್ 2021 (14:51 IST)
ಕಳೆದ ಒಂದೂವರೆ ವರ್ಷದಿಂದ ಇಡೀ ವಿಶ್ವವೇ ಕೋವಿಡ್-19 ವೈರಸ್ ಹಾವಳಿಂದಾಗಿ ತತ್ತರಿಸಿ ಹೋಗಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಕರ್ನಾಟಕದಲ್ಲಿ ಮೂರನೆಯ ಅಲೆಯಿಂದ ಸಂಭವಿಸಬಹುದಾದಂತಹ ಸಾವು ನೋವುಗಳನ್ನು ನಿಯಂತ್ರಿಸಲು ಈಗಾಗಲೇ ಕರ್ನಾಟಕ ಸರ್ಕಾರವು ಅನೇಕ ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ.

ಈಗಾಗಲೇ ಬೇರೆ ರಾಜ್ಯಗಳೊಂದಿಗೆ ಗಡಿಭಾಗ ಹಂಚಿಕೊಳ್ಳುವಂತಹ ನಮ್ಮ ರಾಜ್ಯದ ನಗರಗಳಿಗೆ ಯಾವುದೇ ವ್ಯಕ್ತಿ ಬೇರೆ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಬರುತ್ತಿದ್ದರೆ, ಅಂತಹವರು 72 ಗಂಟೆಯ ಒಳಗೆ ಮಾಡಿಸಿಕೊಂಡ ಕೋವಿಡ್ ಸಂಬಂಧಿತ RTPCR ಪರೀಕ್ಷೆಯ ನೆಗೆಟಿವ್ ವರದಿ ತರುವುದು ಕಡ್ಡಾಯವಾಗಿದೆ. ಪೊಲೀಸ್ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯವರು ವರದಿಯನ್ನು ಗಡಿಭಾಗದಲ್ಲಿ ನೋಡಿದ ನಂತರ ಅವರನ್ನು ನಮ್ಮ ರಾಜ್ಯಕ್ಕೆ ಬರಲು ಅನುಮತಿ ನೀಡುತ್ತಿದ್ದಾರೆ.
ಇನ್ಮುಂದೆ ನೀವು ಬೇರೆ ರಾಜ್ಯಗಳಿಗೆ ಹೋಗಿ ಮತ್ತೆ ಬೆಂಗಳೂರಿನಲ್ಲಿರುವ ನಿಮ್ಮ ಅಪಾರ್ಟ್ಮೆಂಟ್ನಲ್ಲಿರುವ ಫ್ಲ್ಯಾಟ್ಗೆ ಹಿಂದಿರುಗಿ ಬರುತ್ತಿದ್ದರೆ, ನೀವು RTPCR ಪರೀಕ್ಷೆಯ ವರದಿ ತರಬೇಕಾಗಿದ್ದು ಅದರಲ್ಲಿ ನೀವು ನೀಡಿದಂತಹ ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ಬಂದಿರಬೇಕು.
ಯಾರು RTPCR ಪರೀಕ್ಷೆಯ ವರದಿ ತೆಗೆದುಕೊಂಡು ಬಂದಿರುವುದಿಲ್ಲವೋ, ಅಂತಹವರು ಕಡ್ಡಾಯವಾಗಿ RTPCR ಪರೀಕ್ಷೆಗೆ ಒಳಗಾಗಿ ವರದಿ ಬರುವವರೆಗೂ ಹೋಂ ಕ್ವಾರಂಟೈನ್ನಲ್ಲಿರಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ ಇತ್ತೀಚೆಗೆ ಕಟ್ಟು ನಿಟ್ಟಿನ ಕ್ರಮಗಳ ಸೂಚನೆಯ ಪಟ್ಟಿಗೆ ಇದನ್ನೂ ಸೇರಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು ಮತ್ತು ಕಂಟೈನ್ಮೆಂಟ್ ವಲಯಗಳ ಸಂಖ್ಯೆ 160ಕ್ಕೆ ಏರಿದ್ದು, ಇದರಲ್ಲಿ ಅರ್ಧದಷ್ಟು ವಲಯಗಳಲ್ಲಿ ಅಪಾರ್ಟ್ಮೆಂಟ್ಗಳಿವೆ. ಅದಕ್ಕಾಗಿ ಬೇರೆ ರಾಜ್ಯಗಳಿಗೆ ಹೋಗಿ ಮತ್ತೆ ಬೆಂಗಳೂರಿನಲ್ಲಿರುವಂತಹ ತಮ್ಮ ಅಪಾರ್ಟ್ಮೆಂಟ್ಗೆ ಹಿಂದಿರುಗುತ್ತಿದ್ದರೆ RTPCR ಪರೀಕ್ಷೆಯ ವರದಿಯನ್ನು ತರುವುದನ್ನು ಕಡ್ಡಾಯ ಮಾಡಿದ್ದು, ವರದಿಯು 72 ಗಂಟೆಗಿಂತಲೂ ಹಳೆಯದಾಗಿರಬಾರದು ಎಂದು ತಿಳಿಸಿದ್ದಾರೆ. ತಮ್ಮ ಕೆಲಸದ ನಿಮಿತ್ತ ಬೇರೆ ರಾಜ್ಯಗಳಿಗೆ ಹೋಗಿ ಬಂದವರು ಸಹ RTPCR ಪರೀಕ್ಷೆಯ ವರದಿ ತರಬೇಕು ಎಂದು ಅಪಾರ್ಟ್ಮೆಂಟ್ ಮಾಲೀಕರಿಗೆ ಸೂಚನೆ ಹೊರಡಿಸಿದ್ದಾರೆ.
3 ವರ್ಷ ವಯಸ್ಸು ಮೇಲ್ಪಟ್ಟ ಮಕ್ಕಳು ಮನೆಯಿಂದ ಹೊರಗೆ ಬಂದರೆ ಮಾಸ್ಕ್ ಧರಿಸಬೇಕು
ಅಪಾರ್ಟ್ಮೆಂಟ್ಗಳಲ್ಲಿರುವ ಮಕ್ಕಳು ಮನೆಯಿಂದ ಹೊರಗೆ ಆಟದ ಮೈದಾನದಲ್ಲಿ ಆಟವಾಡಲು ಬಂದರೆ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಿ ಎಂದು ಮುಖ್ಯ ಆಯುಕ್ತರು ಅಪಾರ್ಟ್ಮೆಂಟ್ಗಳಿಗೆ ಹೊರಡಿಸಿದ ಸೂಚನೆಗಳಲ್ಲಿ ಬರೆದಿದ್ದಾರೆ. ಹಾಗೆಯೇ ಅಪಾರ್ಟ್ಮೆಂಟ್ಗಳಿಗೆ ಹೊರಗಡೆಯಿಂದ ಯಾರು ಬರುತ್ತಾರೆ, ಅವರ ವಿವರಗಳನ್ನು ಸಹ ಮಾಲೀಕರು ಬರೆದಿಟ್ಟುಕೊಳ್ಳುವುದು ಅವಶ್ಯಕವಾಗಿದೆ ಎಂದು ಸೂಚನೆಗಳಲ್ಲಿ ಬರೆದಿದ್ದಾರೆ.
ಯಾವುದೇ ಅಪಾರ್ಟ್ಮೆಂಟ್ನಲ್ಲಿ 3 ಅಥವಾ ಅದಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾದಲ್ಲಿ ಅದರ ಸುತ್ತಲೂ 100 ಮೀಟರ್ ವ್ಯಾಪ್ತಿಯಲ್ಲಿ ಬರುವಂತಹ ಮನೆಗಳನ್ನು ಸಹ ಸೇರಿಸಿಕೊಂಡು ಅದನ್ನು ಕಂಟೈನ್ಮೆಂಟ್ ವಲಯ ಎಂದು ಗುರುತಿಸಲಾಗುವುದು ಎಂದು ಗೌರವ್ ಗುಪ್ತಾ ಸ್ಪಷ್ಟವಾಗಿ ಬರೆದಿದ್ದಾರೆ. ಕಂಟೈನ್ಮೆಂಟ್ ವಲಯವು ಪ್ರಕರಣಗಳು ಪತ್ತೆಯಾದ ದಿನದಿಂದ 14 ದಿನಗಳವರೆಗೂ ಚಾಲ್ತಿಯಲ್ಲಿರುತ್ತದೆ ಎಂದು ಹೇಳಲಾಗಿದೆ


Share this Story:

Follow Webdunia kannada

ಮುಂದಿನ ಸುದ್ದಿ

ಆಗಸ್ಟ್ 23ರಿಂದ ಶಾಲೆಗಳು ಶುರು, ಇಂದು ಸಂಜೆ ಮಾರ್ಗಸೂಚಿ ಪ್ರಕಟ