ನವದೆಹಲಿ(ಆ.14): ಜಾಗತಿಕ ತಾಪಮಾನ ಹೆಚ್ಚಳ, ಪ್ರಾಕೃತಿಕ ವಿಕೋಪ, ಜೀವ ಹಾಗೂ ಸಸ್ಯ ಸಂಕುಲ, ಜಲಚರಗಳಿಗೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಆದರೆ ಪ್ಲಾಸ್ಟಿಕ್ ಬಳಕೆ ಹಾಗೂ ಉತ್ಪಾದನೆ ನಿಂತಿಲ್ಲ. ಇದೀಗ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಮುಂದಿನ ವರ್ಷ ಜುಲೈ ತಿಂಗಳಿನಿಂದ ಏಕ ಬಳಕೆ ಪ್ಲಾಸ್ಟಿಕ್ ಉತ್ಪಾದನೆ ಹಾಗೂ ಬಳಕೆ ಸಂಪೂರ್ಣ ನಿಷೇಧಿಸಿದೆ.
ಏಕ ಬಳಕೆ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದೆ. ಇದು ಪರಿಸರಕ್ಕೆ ಅತ್ಯಂತ ಹಾನಿಕರವಾಗಿದೆ. ಕಾರಣ ಈ ಪ್ಲಾಸ್ಟಿಕ್ ಪುನರ್ ಬಳಕೆ ಕೂಡ ಸಾಧ್ಯವಿಲ್ಲ. ಹೀಗಾಗಿ ಬಳಕೆ ಮಾಡಿದ ಬಳಿಕ ಪರಿಸರಕ್ಕೆ, ನದಿ, ಸಮುದ್ರ ಸೇರುತ್ತಿದೆ. ಇದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ಇದೀಗ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಜುಲೈ 2022ರಿಂದ ಎಕ ಬಳಕೆ ಪ್ಲಾಸ್ಟಿಕ್ ಉತ್ಪಾದನೆ ಹಾಗೂ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ.
ಪ್ಲಾಸ್ಟಿಕ್ ಪ್ಲೇಟ್, ಪ್ಲಾಸ್ಟಿಕ್ ಗ್ಲಾಸ್, ಜ್ಯೂಸ್ ಸ್ಟ್ರಾ, ಸ್ಪೂನ್, ಬಾಟಲಿ ಸೇರಿದಂತೆ ಹಲವು ಏಕ ಬಳಕೆ ಪ್ಲಾಸ್ಟಿಕ್ ನಿಷೇಧವಾಗುತ್ತಿದೆ. ಇದರ ಜೊತೆಗೆ ಮತ್ತೊಂದು ನಿರ್ಧಾರ ತೆಗೆದುಕೊಂಡಿದೆ. ಪಾಲಿಥಿನ್ ಬ್ಯಾಗ್ ದಪ್ಪವನ್ನು 50 ಮೈಕ್ರಾನ್ಗಳಿಂದ 150 ಮೈಕ್ರಾನ್ಗೆ ಹೆಚ್ಚಿಸಲಾಗಿದೆ. ಇದನ್ನು ಎರಡು ಹಂತದಲ್ಲಿ ಜಾರಿಗೊಳಿಸಲಾಗುತ್ತಿದೆ. ಮೊದಲ ಹಂತ ಇದೇ ವರ್ಷ ಸೆಪ್ಟೆಂಬರ್ 30 ರಿಂದ ಆರಂಭಗೊಳ್ಳುತ್ತಿದೆ. ಈ ವೇಳೆ 75 ಮೈಕ್ರಾನ್ಗಳಿಂತ ಕಡಿಮೆ ದಪ್ಪದ ಪಾಲಿಥಿನ್ ಚೀಲಗಳನ್ನು ನಿಷೇಧಿಸಲಾಗುತ್ತಿದೆ. ಇನ್ನು ಮುಂದಿನ ವರ್ಷ ಡಿಸೆಂಬರ್ 31 ರಿಂದ 120 ಮೈಕ್ರಾನ್ಗಳಿಗಿಂತ ಕಡಿಮೆ ದಪ್ಪದ ಪಾಲಿಥಿನ್ ಬ್ಯಾಗ್ ನಿಷೇಧಿಸಲಾಗುತ್ತದೆ.
ಪರಿಸರ ಸಚಿವಾಲಯದ ಹೊಸ ನಿಯಮದ ಪ್ರಕಾರ ಪ್ಲಾಸ್ಟಿಕ್ ಉತ್ಪಾದಕ ಕಂಪನಿಗಳು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಅPಅಃ)ಯಿಂದ ಪರವಾನಗೆ ಪಡೆಯಬೇಕಿದೆ. ಇಷ್ಟೇ ಅಲ್ಲ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆಯಲ್ಲಿ ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ ಹಾಗೂ ಪರವಾನಗೆ ರದ್ದಾಗಲಿದೆ.
ಪರಿಸರ ಇಲಾಖೆ ಈ ಕುರಿತು ಸೂಚನೆ ನೀಡಿದೆ. ಇದೀಗ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧಕ್ಕೂ ಚಿಂತನೆ ಮಾಡಲಾಗಿದೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!