ಮುಂಬೈ(ಜು.14): ವಾಹನ ನಿಲುಗಡೆಗೆ ಸಾರ್ವತ್ರಿಕ ನೀತಿ ರೂಪಿಸದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಾಂಬೆ ಹೈಕೋರ್ಟ್ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದೆ. ಸೂಕ್ತ ರೀತಿಯ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ 4-5 ವೈಯಕ್ತಿಕ ವಾಹನ ಖರೀದಿಗೆ ಅಧಿಕಾರಿಗಳು ಪರವಾನಗಿ ನೀಡಬಾರದು ಎಂದು ಸೂಚಿಸಿದೆ.
ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ. ದೀಪಂಕರ್ ದತ್ತಾ ಮತ್ತು ಜಿ.ಎಸ್.ಕುಲಕರ್ಣಿ ನೇತೃತ್ವದ ದ್ವಿಪೀಠ, ಕೇವಲ ಒಂದು ಫ್ಲ್ಯಾಟ್ ಹೊಂದಿರುವ ಕುಟುಂಬಕ್ಕೆ ನಿವಾಸದಲ್ಲಿ ಸೂಕ್ತ ರೀತಿಯ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ನಾಲ್ಕೈದು ಕಾರು ಖರೀದಿಗೆ ಅವಕಾಶ ನೀಡಬಾರದು ಎಂದು ಸೂಚಿಸಿದೆ.
ಇದೇ ವೇಳೆ ಹೊಸ ಕಾರುಗಳ ಖರೀದಿ ತಗ್ಗಿಸಬೇಕಾದ ಅಗತ್ಯವಿದೆ. ಒಂದು ಕುಟುಂಬಕ್ಕೆ ಕೊಳ್ಳುವ ಸಾಮರ್ಥ್ಯವಿದೆ ಎಂದ ಮಾತ್ರಕ್ಕೆ ನಾಲ್ಕೈದು ಕಾರು ಕೊಂಡುಕೊಳ್ಳಲು ಪರವಾನಗಿ ನೀಡಬಾರದು. ಅವರು ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಹೊಂದಿದ್ದಾರೆಯೇ ಎಂಬುದನ್ನೂ ಪರಿಶೀಲಿಸಬೇಕು ಎಂದು ಸೂಚಿಸಿದೆ.
ವಾಹನಗಳಿಗೆ ಪಾರ್ಕಿಂಗ್ ಸ್ಥಳಗಳನ್ನು ಗೊತ್ತುಪಡಿಸುವುದಕ್ಕಾಗಿ ಮಹಾರಾಷ್ಟ್ರದಲ್ಲಿ ಏಕರೂಪದ ನೀತಿಯ ಕೊರತೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಹೈಕೋರ್ಟ್, ಸಾಕಷ್ಟು ಪಾರ್ಕಿಂಗ್ ಸ್ಥಳವಿಲ್ಲದಿದ್ದರೆ ನಾಗರಿಕರು ಹೆಚ್ಚಿಗೆ ವೈಯಕ್ತಿಕ ವಾಹನಗಳನ್ನು ಹೊಂದಲು ಅಧಿಕಾರಿಗಳು ಅನುಮತಿಸಬಾರದು ಎಂದು ಹೇಳಿದೆ.
ಏಕೀಕೃತ ಅಭಿವೃದ್ಧಿ ನಿಯಂತ್ರಣ ಮತ್ತು ಪ್ರಚಾರ ನಿಯಮಗಳ ಅಡಿ ಕಾರ್ ಪಾರ್ಕಿಂಗ್ ಸ್ಥಳವನ್ನು ಕಡಿಮೆ ಮಾಡಲು ಡೆವಲಪರ್ಗಳಿಗೆ ನಿಡಿದ ಅನುಮತಿ ತಿದ್ದುಪಡಿ ಮಾಡಿದ ಸರ್ಕಾರದ ಅಧಿಸೂಚನೆಯನ್ನು ಪ್ರಶ್ನಿಸಿ ನವ ಮುಂಬಯಿ ನಿವಾಸಿ ಮತ್ತು ಕಾರ್ಯಕರ್ತ ಸಂದೀಪ್ ಠಾಕೂರ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ