Select Your Language

Notifications

webdunia
webdunia
webdunia
webdunia

ಆಗಸ್ಟ್ 23ರಿಂದ ಶಾಲೆಗಳು ಶುರು, ಇಂದು ಸಂಜೆ ಮಾರ್ಗಸೂಚಿ ಪ್ರಕಟ

ಆಗಸ್ಟ್ 23ರಿಂದ ಶಾಲೆಗಳು ಶುರು, ಇಂದು ಸಂಜೆ ಮಾರ್ಗಸೂಚಿ ಪ್ರಕಟ
ಬೆಂಗಳೂರು , ಸೋಮವಾರ, 16 ಆಗಸ್ಟ್ 2021 (14:19 IST)
ಬೆಂಗಳೂರು(ಆ.16): ಆಗಸ್ಟ್ 23ರಿಂದ ಶಾಲೆಗಳು ಪ್ರಾರಂಭವಾಗುತ್ತವೆ. 9ರಿಂದ 12ನೇ ತರಗತಿವರೆಗೆ ಆಫ್ಲೈನ್ ತರಗತಿಗಳು ಶುರುವಾಗಲಿವೆ. ಶಾಲೆ ಆರಂಭ ಕುರಿತು ಇಂದು ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ. ಶಾಲೆ ಆರಂಭಕ್ಕೆ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಶಾಲೆ ಪ್ರಾರಂಭ ದಿನಾಂಕವನ್ನು ಘೋಷಿಸಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಜಿಲ್ಲೆ ಹೊರತುಪಡಿಸಿ ಉಳಿದ ಕಡೆ ಶಾಲೆಗಳನ್ನು ಪ್ರಾರಂಭಿಸುತ್ತಿದ್ದೇವೆ. ಮಕ್ಕಳಿಗೆ ಪೂರಕವಾದ ಮಾರ್ಗಸೂಚಿ ಪ್ರಕಟವಾಗಲಿದೆ. ಇಂದು ಸಂಜೆ ಎಸ್ ಒಪಿ ರಿಲೀಸ್ ಆಗುತ್ತದೆ. ಮಕ್ಕಳಿಗೆ ಮಾಸ್ಕ್ ಕಡ್ಡಾಯ ಮಾಡಲಾಗುತ್ತದೆ. ಮನೆಯಿಂದ ಬಂದು ಮನೆಗೆ ವಾಪಸಾಗುವವರೆಗೆ ಮಾಸ್ಕ್ ಧರಿಸಿರಬೇಕು. ಇದನ್ನ ಶಿಕ್ಷಕರು ನೋಡಿಕೊಳ್ತಾರೆ. ಶಿಕ್ಷಕರಿಂದಲೂ ಶಾಲೆ ಪ್ರಾರಂಭಕ್ಕೆ ಬೆಂಬಲವಿದೆ ಎಂದರು.
ಖಾಸಗಿ ಶಾಲೆಗಳು ಪೋಷಕರಿಂದ ಶುಲ್ಕ ವಸೂಲಿ ಮಾಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಬಿ.ಸಿ.ನಾಗೇಶ್, ನಾವು ಯಾವುದನ್ನೂ ಬಲವಂತವಾಗಿ ಹೇರಲು ಆಗಲ್ಲ ರೂಪ್ಸಾ ಜೊತೆ ಮಾತನಾಡಿದ್ದೇನೆ. ಕೋವಿಡ್ನಿಂದಾಗಿ ಪೋಷಕರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಹೆಚ್ಚು ಬಲವಂತ ಮಾಡಬೇಡಿ ಎಂದಿದ್ದೇವೆ. ಇದಕ್ಕೆ ಖಾಸಗಿ ಶಾಲೆಗಳ ಸಂಘಟನೆ ಒಪ್ಪಿದೆ ಎಂದು ಹೇಳಿದರು.
ಮುಂದುವರೆದ ಅವರು, ಸಂಪೂರ್ಣ ಶುಲ್ಕ ಕಟ್ಟಿ ಅನ್ನುವುದು ಸರಿಯಲ್ಲ. ಪೋಷಕರನ್ನ ಕಸ್ಟಮರ್ ರೀತಿ ನೋಡಿಬೇಡಿ ಎಂದಿದ್ದೇನೆ.  ಶಾಲೆಗಳನ್ನೂ ಇತಿಮಿತಿಗೆ ತೆಗೆದುಕೊಳ್ಳಬೇಕು. ಪೋಷಕರ ಹಿತವನ್ನೂ ಗಮನಿಸಬೇಕು. ಎಲ್ಲವನ್ನೂನೋಡಿಯೇ ನಿರ್ಧಾರ ತೆಗೆದುಕೊಳ್ತೇವೆ. ಕೆಲವೊಂದು ವಿಚಾರ ಕೋರ್ಟ್ನಲ್ಲಿವೆ. ಹಾಗಾಗಿ ನೇರವಾಗಿ ಹಿಡಿತ ಸಾಧಿಸುವುದು ಕಷ್ಟ ಎಂದರು.
ಮೂರನೇ ಅಲೆ ಬರುತ್ತೆ ಎಂದು ಹೇಳುತ್ತಿದ್ದಾರೆ. ತಜ್ಞರ ಸಲಹೆಗೆ ಹೆಚ್ಚಿನ ಒತ್ತು ಕೊಟ್ಟಿದ್ದೇವೆ. ಆಗಸ್ಟ್ 30 ರಂದು ತಜ್ಞರ ಸಮಿತಿ ಸಭೆ ನಡೆಯುತ್ತೆ. ತಜ್ಞರ ಜೊತೆ ಸಿಎಂ ಸಭೆ ನಡೆಸಲಿದ್ದಾರೆ. ಅಲ್ಲಿ 1 ರಿಂದ 8ನೇ ತರಗತಿವರೆಗೆ ಶಾಲೆಗಳನ್ನು ತೆರೆಯುವ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ. ಆಗಸ್ಟ್ 23 ರಿಂದ 9-12ನೇ ತರಗತಿಗಳನ್ನು ಪ್ರಾರಂಭ ಮಾಡ್ತೇವೆ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ತಹಸೀಲ್ದಾರ್ಗಳು ಹಾಗೂ ಬಿಇಒ ಜೊತೆ ಮಾತನಾಡಿ, ಶಿಕ್ಷಕರ ಜೊತೆ ಕೈಜೋಡಿಸುವಂತೆ ಸೂಚಿಸಿದ್ದೇವೆ. ಶಾಲಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡುವುದು. ಮಕ್ಕಳಿಗೆ ಮಾಸ್ಕ್ ಒದಗಿಸುವುದು- ಕೆಲಸಗಳನ್ನು ಸ್ಥಳೀಯ ಮಟ್ಟದಲ್ಲಿ ಗ್ರಾ.ಪಂಗಳು ನೋಡಿಕೊಳ್ಳುತ್ತವೆ.  ಪೋಷಕರಿಗೆ ಶಾಲೆಗೆ ಮಕ್ಕಳನ್ನು ಕಳಿಸಿ ಎಂದು ನಾವು ಕಡ್ಡಾಯ ಮಾಡ್ತಿಲ್ಲ. ಮಕ್ಕಳು ಆನ್ ಲೈನ್, ಆಫ್ಲೈನ್ ಯಾವುದರ ಮೂಲಕ ಬೇಕಾದರೂ ಶಿಕ್ಷಣ ಪಡೆಯಬಹುದು. ಅದನ್ನು ಪೋಷಕರ ಇಚ್ಚೆಗೆ ಬಿಟ್ಟಿದ್ದೇವೆ ಎಂದರು.
ಇನ್ನು, ಸೋಂಕು ಕಂಡು ಬಂದರೆ ಶಾಲೆಗಳನ್ನು ನಿಲ್ಲಿಸುವ ಶಕ್ತಿ ಸರ್ಕಾರಕ್ಕಿದೆ. ಒಂದೇ ಒಂದು ಪ್ರಕರಣ ಮತ್ತೆಯಾದರೂ ಆಫ್ಲೈನ್ ತರಗತಿಗಳನ್ನು ನಿಲ್ಲಿಸ್ತೇವೆ ಎಂದು ಹೇಳಿದರು


Share this Story:

Follow Webdunia kannada

ಮುಂದಿನ ಸುದ್ದಿ

‘ವೈದ್ಯರ ನಡೆ ಮನೆ ಬಾಗಿಲಿನ ಕಡೆ‘ ಅಭಿಯಾನಕ್ಕೆ ಚಾಲನೆ